

ನೆಲಮಂಗಲ: ಪ್ರತಿಲಾಪೇಕ್ಷೆ ಇಲ್ಲದೆ ಜನಸಾಮಾನ್ಯರಿಗೆ ಸೇವೆ ಒದಗಿಸುತ್ತಿರುವ ಪಾರಂಪರಿಕ ವೈದ್ಯ ಪದ್ಧತಿಯನ್ನು ವಿಶ್ವಕ್ಕೆ ಪರಿಚಯಿಸಿ, ಉಳಿಸಬೇಕಿದೆ ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದ ಪವಾಡ ಶ್ರೀ ಬಸವಣ್ಣ ದೇವರ ಮಠದಲ್ಲಿ ಪಾರಂಪರಿಕ ವೈದ್ಯ ಪರಿಷತ್, ಜೀವವೈವಿಧ್ಯ ಮಂಡಳಿ, ಔಷಧ ಸಸ್ಯಗಳ ಪ್ರಾಧಿಕಾರ, ಅಂತರ ವಿಷಯಗಳ ಆರೋಗ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯ ಹಾಗೂ ಅದಿಚುಂಚನಗಿರಿ ಆಯುರ್ವೇದ ಕಾಲೇಜಿನಿಂದ ಗುರುವಾರ ಏರ್ಪಡಿಸಿದ್ದ ಕರ್ನಾಟಕ ಮೂಲಿಕಾ ಉತ್ಸವ ಹಾಗೂ ಪಾರಂಪರಿಕ ವೈದ್ಯ ಸಮ್ಮೇಳನದಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಕೆಲವರು ವಂಶ ಪಾರಂಪರ್ಯವಾಗಿ ನಾಟಿ ವೈದ್ಯ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ. ಜನರಿಂದ ಹಣ ಪಡೆಯದೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪಾರಂಪರಿಕ ವೈದ್ಯ ಪದ್ಧತಿಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡಬೇಕು. ಆರೋಗ್ಯಸೇವೆಯ ವೆಚ್ಚ ತಗ್ಗಿಸುವ ಶಕ್ತಿ ಪಾರಂಪರಿಕ ವೈದ್ಯ ಪದ್ಧತಿಗಿದೆ ಎಂದರು.
ರಾಜ್ಯ ಔಷಧ ಸಸ್ಯಗಳ ಪ್ರಾಧಿಕಾರದ ಸಲಹೆಗಾರ್ತಿ ಡಾ. ರೂಪಾ ಡಿ. ಭಟ್ ಮಾತನಾಡಿ, ನಾಟಿ ವೈದ್ಯರಲ್ಲಿ ಅಪಾರವಾದ ಅನುಭವ ಇತ್ತು. ಅವರು ಅನೇಕ ಕಾಯಿಲೆಗಳನ್ನು ಬಹುಬೇಗ ಗುಣಪಡಿಸುತ್ತಿದ್ದರು. ಈ ವೈದ್ಯ ಪದ್ಧತಿ ಅತ್ಯಂತ ಪರಿಣಾಮಕಾರಿಯೂ ಹೌದು ಎಂದು ಹೇಳಿದರು.
ಈ ಪದ್ಧತಿ ಅನೇಕ ಋಷಿಮುನಿಗಳ, ಪಂಡಿತರ ಸಾವಿರಾರು ವರ್ಷಗಳ ಅನುಭವದಿಂದ ಮೂಡಿ ಬಂದ ಜ್ಞಾನವಾಗಿದೆ. ಅದನ್ನು ಪ್ರಯೋಗ ಮಾಡಿ ನಂತರ ಅಕ್ಷರಗಳಲ್ಲಿ ದಾಖಲಿಸಿದ್ದಾರೆ. ಅಂಥ ಅನುಭಾವ ಇರುವ ಪದ್ಧತಿಯನ್ನು ಸಾರ್ವಕಾಲಿಕವಾಗಿ ಉಳಿಯುವಂತೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದರು.
ಗಿಡಮೂಲಿಕ ವಸ್ತು ಪ್ರದರ್ಶನ: ಸಮ್ಮೇಳನದ ಪ್ರಯುಕ್ತ 1 ಸಾವಿರಕ್ಕೂ ಹೆಚ್ಚು ಆಯುರ್ವೇದ ಔಷಧ ಸಸ್ಯಗಳನ್ನು ಪ್ರದರ್ಶಿಸಲಾಗಿತ್ತು. ಜತೆಗೆ ಉಚಿತ ತಪಾಸಣೆ ಮಾಡಲಾಯಿತು.
ನಿವೃತ್ತ ಐಎಎಸ್ ಅಧಿಕಾರಿ ಮೋಹನ್ ಕಾರ್ನಾಟ, ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ನೇರ‌್ಲಿಗಿ ಗುರುಸಿದ್ಧಪ್ಪ, ತಾಲೂಕು ಅಧ್ಯಕ್ಷ ಡಿ.ಜಿ. ಶಂಕರಪ್ಪ, ಆದಿಚುಂಚನಗಿರಿ ಆಯುರ್ವೇದ ಕಾಲೇಜಿನ ವೈದ್ಯರಾದ ಮನಸ್ವಿನಿ, ಬೈರೇಶ್, ರಾಜ್ಯಜೀವ ವೈವಿದ್ಯ ಮಂಡಳಿ ಉಪಸಂರಕ್ಷಾಧಿಕಾರಿ ಡಾ. ಪವಿತ್ರಾ, ಟಿಡಿಯು ಪ್ರೊ. ಹರಿರಾಮ್‌ಮೂರ್ತಿ ಮತ್ತಿತರರು ಇದ್ದರು.