

ರಿಪ್ಪನ್‌ಪೇಟೆ: ಪಾರಂಪರಿಕವಾಗಿ ಬೆಳೆದುಕೊಂಡು ಬಂದಿದ್ದ ಅನೇಕ ಭತ್ತದ ತಳಿಗಳು ಇಂದು ಕಣ್ಮರೆಯಾಗಿವೆ. ಸತ್ವಯುತ ಆಹಾರಕ್ಕಾಗಿ ನಶಿಸುತ್ತಿರುವ ಭತ್ತದ ತಳಿಗಳನ್ನು ಪ್ರಸ್ತುತ ದಿನಗಳಲ್ಲಿ ಸಂರಕ್ಷಿಸುವ ಅಗತ್ಯವಿದೆ ಎಂದು ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕ ಹನಿಯ ರವಿ ಹೇಳಿದರು.
ಪಟ್ಟಣದಲ್ಲಿ ಬುಧವಾರ ಕೃಷಿ ಪ್ರಯೋಗ ಪರಿವಾರ, ಅಶ್ವಿನಿ ಸಾವಯವ ಕೃಷಿ ಪರಿವಾರ, ಗ್ರಾಮ ಭಾರತೀಯ ಟ್ರಸ್ಟ್ ಆಶ್ರಯದಲ್ಲಿ ಪಾರಂಪರಿಕ ಭತ್ತದ ತಳಿಗಳ ಸಂರಕ್ಷಣೆ ಅಭಿಯಾನದ ಅಂಗವಾಗಿ ಆಯೋಜಿಸಲಾಗಿದ್ದ ಶುದ್ಧ ನೈವೇದ್ಯ ಸಮರ್ಪಣಂ, ಬೊಗಸೆ ಭತ್ತದ ಬೀಜ ಪ್ರದಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ಇಂದು ಅನೇಕ ಬದಲಾವಣೆಗಳಾಗಿವೆ. ದೇಸಿ ಭತ್ತದ ತಳಿಗಳ ಜಾಗವನ್ನು ನೂತನ ಆವಿಷ್ಕಾರಕ ತಳಿಗಳು ಆಕ್ರಮಿಸಿವೆ. ಸಾಂಪ್ರದಾಯಕ ಕೃಷಿ ಪದ್ಧತಿಯ ಬದಲು ಯಾಂತ್ರೀಕೃತ ಪದ್ಧತಿ ಆರಂಭವಾಗಿದೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಇದರಿಂದಾಗಿ ಭೂಮಿ ತನ್ನ ಮೂಲ ಸತ್ವವನ್ನೇ ಕಳೆದುಕೊಂಡಿದ್ದು ಪರಿಸರವೂ ವಿಷಪ್ರಾಶನವಾಗುತ್ತಿದೆ. ಆರೋಗ್ಯಯುತ ಸಮಾಜ ನಿರ್ಮಾಣಕ್ಕಾಗಿ ಸಾವಯವ ಪದ್ಧತಿಯಿಂದ ಶುದ್ಧ ಆಹಾರವನ್ನು ಉತ್ಪಾದಿಸಬೇಕಾಗಿದೆ ಎಂದರು.
ಕೃಷಿ ಪ್ರಯೋಗ ಪರಿವಾರದ ಬಿ.ಎಸ್.ದಿನೇಶ್, ಅಶ್ವಿನಿ, ಸಾವಯವ ಕೃಷಿ ಪರಿವಾರದ ಎಚ್.ಎಂ.ರಾಘವೇಂದ್ರ, ಶ್ರೀವತ್ಸ, ಪುರುಷೋತ್ತಮ ರಾವ್, ಬೆಳ್ಳೂರು ವಸಂತ್, ಅರುಣಕುಮಾರ್, ಅಶ್ವಥ್ ಇನ್ನಿತರಿದ್ದರು.