

ಅಶೋಕ ಶೆಟ್ಟರ, ಬಾಗಲಕೋಟೆ: ನಗರದ ಕಲಾಭವನದಲ್ಲಿ ಶನಿವಾರ ನಡೆದ ಸಿರಿಧಾನ್ಯ ಹಾಗೂ ಸಾವಯವ ಮೇಳದಲ್ಲಿ ಏರ್ಪಡಿಸಿದ್ದ ಪಾರಂಪರಿಕ ಕೃಷಿ ಸಲಕರಣೆ ಹಾಗೂ ಕೃಷಿ ಪರಿಕರಗಳ ಪ್ರದರ್ಶನ ಮೇಳಕ್ಕೆ ಆಗಮಿಸಿದ್ದ ಜನರನ್ನು ವಿಶೇಷವಾಗಿ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಆಶ್ರಯದಲ್ಲಿ ನಡೆದ ಸಿರಿಧಾನ್ಯ ಮೇಳದಲ್ಲಿ ಕೃಷಿ ಇಲಾಖೆ ಏರ್ಪಡಿಸಿದ್ದ ಈ ಪಾರಂಪರಿಕ ಕೃಷಿ ಪರಿಕರಗಳು ಅನೇಕರನ್ನು ತಮ್ಮತ್ತ ಸೆಳೆದವು. ಆಧುನಿಕತೆ ಭರಾಟೆ, ಯಂತ್ರೋಪಕರಣಗಳ ಅಬ್ಬರ ಹಾಗೂ ಕ್ಷೀಣಗೊಳ್ಳುತ್ತಿರುವ ಒಕ್ಕಲುತನದಿಂದಾಗಿ ಇವತ್ತಿನ ಮಕ್ಕಳು ಮತ್ತು ಯುವಕರಿಗೆ ಹಿಂದೆಲ್ಲ ತಮ್ಮ ಹಿರಿಯರು ಬಳಕೆ ಮಾಡುತ್ತಿದ್ದ ಅನೇಕ ಕೃಷಿ ಪೂರಕ ಪರಿಕರಗಳ ಪರಿಚಯವೇ ಇಲ್ಲವಾಗಿದೆ. ಇದನ್ನು ಮಕ್ಕಳು ಮತ್ತು ಯುವಕರಿಗೆ ಪರಿಚಯಿಸುವ ನಿಟ್ಟಿನಲ್ಲಿ ಹತ್ತಾರು ಪರಿಕರಗಳನ್ನು ಸಂಗ್ರಹಿಸಿ, ಈ ಪ್ರದರ್ಶನ ಏರ್ಪಡಿಸಿದ್ದು ಮೇಳಕ್ಕೆ ಆಗಮಿಸಿದ್ದ ಹಿರಿ, ಕಿರಿಯರಿಗೆ ವಿಶೇಷ ಆಕರ್ಷಣೆಯಾಗಿ ಕಂಡಿತು.
ಏನೆಲ್ಲ ಇದ್ದವು…?
ಕೃಷಿ ಪರಿಕರಗಳ ಪ್ರದರ್ಶನ ಮಳಿಗೆಯಲ್ಲಿ ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಇದ್ದಂತ ಬಿದರಿನ ಬುಟ್ಟೆ, ಎಣ್ಣೆ ಬುಟ್ಟೆ, ಬಿದರಿಯಿಂದ ತಯಾರಿಸಿ ಪೂಜಾ ಪೆಟ್ಟಿಗೆ, ಚರಕ, ಎತ್ತಿಗೆ ಹಾಕುವ ತೊಗಲಿನ ಜತ್ತಿಗೆ, ಕಾಳು ಕಡಿ ಅಳೆಯುವ ಸೇರು, ಎಲೆ ಅಡಿಕೆ ಡಬ್ಬಿ, ರೈತರು ಜಮೀನಿಗಳಿಗೆ ಹೋಗಲು ನೀರು ತುಂಬಿಕೊಂಡು ಹೋಗುವ ತತ್ರಾಣಿ, ಇಳೀಗೆ, ಶ್ರೀಮಂತರ ಮನೆಯಲ್ಲಿ ಇರುತ್ತಿದ್ದ ದೊಡ್ಡ ಗಾತ್ರದ ರೇಡಿಯೋ, ಪರಾತ್, ರೊಟ್ಟಿ ಮಾಡುವ ಕಟ್ಟಿಗೆಯ ಕೊಮ್ಮಣಿಗೆ, ನೇಗಿಲು, ಜತ್ತಿಗೆ, ಎತ್ತುಗಳ ಬಾಯಿಗೆ ಹಾಕುತ್ತಿದ್ದ ಬಾಯಿ ಚಿಕ್ಕ, ಗೆಜ್ಜೆ, ಎತ್ತುಗಳನ್ನು ಅಲಂಕಾರ ಮಾಡಲು ಬಳಸುವ ಹಣೆಕಟ್ಟು, ಹಗ್ಗ, ಲಡ್ಡು ಹಗ್ಗ, ನೇಗಿಲು, ಬಿತ್ತಲು ಬೀಜ ಹಾಕುವ ಹಾಗೂ ಗೊಬ್ಬರ ಬಿತ್ತುವ ಬಟ್ಟಲು, ಕೊಡಲಿ, ಕುಡಗೋಲು, ಸಲಾಕೆ, ಗುದ್ದಲಿ, ಹಾರಿ ಹೀಗೆ ಹಿಂದೆ ಒಕ್ಕಲುತನಕ್ಕೆ ಹಾಗೂ ಮನೆಯಲ್ಲಿ ಬಳಕೆ ಮಾಡುತ್ತಿದ್ದ ಪಾರಂಪರಿಕ ವಸ್ತುಗಳನ್ನು ಪ್ರದರ್ಶದನಲ್ಲಿ ಇಡಲಾಗಿತ್ತು.
ಸಿರಿಧಾನ್ಯದಲ್ಲಿ ಅರಳಿದ್ದ ಅರ್ಜುನ ಆನೆ :
ಮೈಸೂರ ದಸರಾ ಅಂಬಾರಿ ಹೊತ್ತು ಎಲ್ಲರ ಪ್ರೀತಿಗೆ ಪಾತ್ರವಾಗಿ ಇತ್ತೀಚಿಗೆ ಸಾವನ್ನಪ್ಪಿದ ಅರ್ಜುನ ಆನೆಯನ್ನು ಸ್ಮರಿಸುವ ಕೆಲಸವೂ ಸಿರಿಧಾನ್ಯ ಮೇಳದಲ್ಲಿ ಆಗಿತ್ತು. ಮೇಳದ ಅಂಗವಾಗಿ ಹಾಕಿದ್ದ ವಿವಿಧ ಮಳಿಗೆಗಳ ಜಾಗದ ಮಧ್ಯಭಾಗದಲ್ಲಿ ಎಲ್ಲರ ಚಿತ್ತವನ್ನು ಸೆಳೆಯುವಲ್ಲಿ ಸಿರಿಧಾನ್ಯಗಳ ಅರ್ಜುನ ಆನೆ ಯಶಸ್ವಿಯಾಗಿತ್ತು. ವಿವಿಧ ಬಗೆಯ ಧಾನ್ಯಗಳನ್ನು ಬಳಸಿ ಆನೆ ಚಿತ್ರವನ್ನು ಬಿಡಿಸಿದ್ದು, ಅರ್ಜುನ ಆನೆಗೆ ನಮನ ಎನ್ನುವ ಬರಹವನ್ನು ಬಿಡಿಸಿದ್ದರು. ಮಳಿಗೆಗಳಿಗೆ ಭೇಟಿ ನೀಡುವ ಬಹುತೇಕ ಜನರು ಅರ್ಜುನನ ದರ್ಶನ ಪಡೆಯುತ್ತಿದ್ದ ದೃಶ್ಯವೂ ಕಂಡು ಬಂದಿತು.