

ಕಲಬುರಗಿ: ಗ್ರಾಮ ಪಂಚಾಯಿತಿಗೊಂದು ಮದ್ಯದ ಅಂಗಡಿ ಆರಂಭಿಸಲು ಹೊರಟಿರುವ ರಾಜ್ಯ ಸರ್ಕಾರದ ನಿಲುವಿಗೆ ಸ್ವಪಕ್ಷದ ಶಾಸಕ ಬಿ.ಆರ್.ಪಾಟೀಲ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಪದ ಹಣದಲ್ಲಿ ಸರ್ಕಾರ ನಡೆಸುವ ಅಗತ್ಯವಿಲ್ಲ. ಯಾವ ಪುರುಷಾರ್ಥಕ್ಕಾಗಿ ಮದ್ಯದಂಗಡಿ ಹೆಚ್ಚಿಸಬೇಕು? ಸರ್ಕಾರ ನಡೆಸಲು ಆರ್ಥಿಕ ಸಮಸ್ಯೆ ಇದ್ದರೆ ಬೇರೆ ಮಾರ್ಗ ಕಂಡುಕೊಳ್ಳಬೇಕು. ಶ್ರೀಮಂತರಿಗೆ ಫ್ರೀ ಸ್ಕೀಮ್ ಯಾಕೆ ಕೊಡುತ್ತಿದ್ದಾರೋ ಗೊತ್ತಿಲ್ಲ. ನನ್ನಂಥವರಿಗೂ ಉಚಿತ ವಿದ್ಯುತ್ ನೀಡುವ ಅಗತ್ಯವೇನಿದೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸಮರ್ಥ ಆರ್ಥಿಕ ತಜ್ಞರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೆಲ್ಲ ಮ್ಯಾನೇಜ್ ಮಾಡುವ ವಿಶ್ವಾಸವಿದೆ. ಈ ಕುರಿತು ಶಾಸಕರ ಸಭೆ, ಪಕ್ಷದ ವೇದಿಕೆಯಲ್ಲಿ ಧ್ವನಿ ಎತ್ತುವೆ. ಒಂದು ವೇಳೆ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ನಾನೇ ಹೋರಾಟ ಶುರು ಮಾಡುವೆ ಎಂದು ಎಚ್ಚರಿಸಿದರು.
ಸರ್ಕಾರ ಪತನ ಹಗಲುಗನಸು: ರಾಜ್ಯದ ೧೩೫ ಶಾಸಕರು ಗಟ್ಟಿಯಾಗಿದ್ದು, ಕೆಲವರು ಸರ್ಕಾರ ಬೀಳುವ ಹಗಲುಗನಸು ಕಾಣುತ್ತಿದ್ದಾರೆ ಎಂದು ಶಾಸಕ ಪಾಟೀಲ್ ಲೇವಡಿ ಮಾಡಿದರು.
ಸಂಕ್ರಾಂತಿ ನಂತರ ಸರ್ಕಾರ ಬದಲಾವಣೆ ಕುರಿತ ಸಿ.ಪಿ. ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯೋಗೇಶ್ವರ್ ಕನಸು ಕಾಣುತ್ತಿದ್ದಾರೆ. ನಮ್ಮೆಲ್ಲ ಶಾಸಕರು ಒಗ್ಗಟ್ಟಾಗಿದ್ದು, ಯಾವತ್ತೂ ಕೋಮುವಾದಿಗಳ ಕೈಗೆ ಅಧಿಕಾರ ಕೊಡಲ್ಲ ಎಂದು ಗುಡುಗಿದರು.
ಇಂಡಿಯಾ ಒಕ್ಕೂಟ ಬ್ಯಾನ್ ಮಾಡಬೇಕೆಂಬ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶ್ರೀಗಳು ಬಲಪಂಥೀಯ ವಿಚಾರದವರು. ಸಹಜವೇ ಅವರಿಗೆ ಇದು ಹಿಡಿಸುವುದಿಲ್ಲ. ಸ್ಟಾಲಿನ್ ಪುತ್ರನಿಗೆ ಹೇಳಿಕೆ ನೀಡುವ ಸ್ವಾತಂತ್ರ್ಯವಿದೆ. ಇಂಡಿಯಾ ಒಕ್ಕೂಟ ಬ್ಯಾನ್ ಯಾರಪ್ಪನಿಂದಲೂ ಸಾಧ್ಯವಿಲ್ಲ ಎಂದರು.