ಪಾನಮತ್ತರಾಗಿ ಪೊಲೀಸರಿಗೆ ಧಮ್ಕಿ, ಸಿಕ್ಕಿಬಿದ್ದ ನಕಲಿ ಪತ್ರಕರ್ತರು ಮತ್ತು ಪೊಲೀಸ್ ಅಧಿಕಾರಿ

08 ank news and photos 01
Published on

ಆನೇಕಲ್: ಪಾನಮತ್ತರಾಗಿ ದ್ವಿಚಕ್ರವಾಹನದಲ್ಲಿ ಬರುತ್ತಿದ್ದವರನ್ನು ತಡೆದಾಗ ಪೊಲೀಸರಿಗೇ ಧಮ್ಕಿ ಹಾಕಿದ್ದ ಇಬ್ಬರು ನಕಲಿ ಪತ್ರಕರ್ತರು ಮತ್ತು ನಕಲಿ ಇನ್‌ಸೆಕ್ಟರ್‌ನನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ.

ಸರ್ಜಾಪುರ ಸಮೀಪದ ನಕಲಿ ಇನ್‌ಸ್ಪೆಕ್ಟರ್ ದೊಡ್ಡಕನ್ನಳ್ಳಿಯ ವಿನಯ್‌ಕುಮಾರ್, ನಕಲಿ ಪತ್ರಕರ್ತರಾದ ದೀಪಕ್ ಮತ್ತು ನಂದೀಶ್ ಬಂಧಿತರು.

ತಮಿಳುನಾಡಿನ ಗುಮ್ಮಳಾಪುರದಲ್ಲಿ ವಿನಯ್‌ಕುಮಾರ್, ದೀಪಕ್ ಮತ್ತು ನಂದೀಶ್ ಪಾರ್ಟಿ ಮಾಡಿದ್ದರು. ರಾತ್ರಿ 1 ಗಂಟೆವರೆಗೂ ಮದ್ಯಪಾನ ಮಾಡಿ, ಊಟ ತರಲೆಂದು ದ್ವಿಚಕ್ರವಾಹನದಲ್ಲಿ ಆನೇಕಲ್‌ಗೆ ಬಂದಿದ್ದರು. ವಾಹನದ ಮೇಲೆ ಪ್ರೆಸ್ ಎಂದು ಹಾಕಿಕೊಂಡಿದ್ದರಿಂದ, ವಾಹನ ತಡೆದ ಪೊಲೀಸರು ಅವರಿಬ್ಬರನ್ನೂ ವಿಚಾರಿಸಿದ್ದರು.

ಆಗ ತಾವು ಇನ್‌ಸ್ಪೆಕ್ಟರ್ ಕಡೆಯವರು ಎಂದು ಹೇಳಿ ನಿಜವಾದ ಪೊಲೀಸರಿಗೆ ಅವಾಜ್ ಹಾಕಿದ್ದರು. ಇದರಿಂದ ಅನುಮಾನಗೊಂಡ ಪೊಲೀಸರು ದೀಪಕ್ ಮತ್ತು ಕಾರ್ತಿಕ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ನಕಲಿ ಪತ್ರಕರ್ತರು ಎಂಬುದು ಖಚಿತಪಟ್ಟಿತ್ತು.

ನನ್ನ ಹುಡುಗರನ್ನು ಬಿಟ್ಟುಬಿಡೋ... ಇವರಿಬ್ಬರ ಮೇಲೆ ಮತ್ತಷ್ಟು ಅನುಮಾನಗೊಂಡ ಆನೇಕಲ್ ಠಾಣೆಯ ಎಎಸ್‌ಐ ಚಂದ್ರಶೇಖರ್ ಅವರಿಬ್ಬರನ್ನೂ ಮತ್ತಷ್ಟು ವಿಚಾರಣೆ ನಡೆಸಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ನಕಲಿ ಇನ್‌ಸ್ಪೆಕ್ಟರ್ ವಿನಯ್ ಕುಮಾರ್‌ಗೆ ಕರೆ ಮಾಡಿದ್ದ ದೀಪಕ್, ಪೊಲೀಸರೊಂದಿಗೆ ಮಾತನಾಡುವಂತೆ ಹೇಳಿದ್ದ. ೆನ್‌ನಲ್ಲಿ ತಾನು ಇನ್‌ಸ್ಪೆಕ್ಟರ್ ಎಂದು ವಿನಯ್‌ಕುಮಾರ್ ಹೇಳಿದಾಗ, ಎಎಸ್‌ಐ ಚಂದ್ರಶೇಖರ್, ಪಿಎಸ್‌ಐ ಮಧುಸೂದನ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅಷ್ಟರಲ್ಲೇ ಪಿಎಸ್‌ಐ ಮಧುಸೂದನ ಅವರಿಗೇ ೆನ್ ಮಾಡಿದ್ದ ನಕಲಿ ಇನ್‌ಸ್ಪೆಕ್ಟರ್ ವಿನಯ್‌ಕುಮಾರ್, ನಾನು ಯಾರು ಗೊತ್ತೇನೋ...? ನಮ್ಮ ಹುಡುಗರನ್ನು ಬಿಟ್ಟುಬಿಡು... ಎಂದು ಬೆದರಿಕೆ ಹಾಕಿದ್ದ.

ಈ ಹಂತದಲ್ಲಿ ತಮ್ಮ ಬ್ಯಾಡ್ಜ್ ನಂಬರ್ ಕೊಡಿ, ನೀವು ಯಾವ ಠಾಣೆಯ ಇನ್‌ಸ್ಪೆಕ್ಟರ್ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ಮಧುಸೂದನ್ ಹೇಳಿದಾಗ, ‘ಮಾತನಾಡುತ್ತಿರುವುದು ಇನ್‌ಸ್ಪೆಕ್ಟರ್.... ನನ್ನ ಮಾತಿಗೆ ಬೆಲೆ ಇಲ್ಲವಾ...? ಇನ್‌ಸ್ಪೆಕ್ಟರ್ ಒಬ್ಬರಿಗೆ ಬ್ಯಾಡ್ಜ್ ನಂಬರ್ ಕೇಳುತ್ತೀಯಾ... ನಿನ್ನನ್ನು ಸಸ್ಪೆಂಡ್ ಮಾಡಿಸುತ್ತೇನೆ... ನಾಳೆ ಡ್ಯೂಟಿನಲ್ಲಿ ಒಂದೋ ನೀನು ಇರಬೇಕು... ಇಲ್ಲ ನಾನು ಇರಬೇಕು’ ಎಂದು ಹೆದರಿಸಿದ್ದ.

ಅಷ್ಟರಲ್ಲೇ ಈತ ನಕಲಿ ಇನ್‌ಸ್ಪೆಕ್ಟರ್ ಎಂಬುದು ಖಚಿತವಾದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸುಂತೆ ಎಎಸ್‌ಐ ಚಂದ್ರಶೇಖರ್ ಅವರಿಗೆ ಮಧುಸೂದನ್ ಸೂಚಿಸಿದ್ದರು. ಸರ್ಜಾಪುರ ಸಮೀಪದ ಕನ್ನಹಳ್ಳಿಯ ಮನೆಗೆ ದಾಳಿ ಮಾಡಿದ ಆನೇಕಲ್ ಪೊಲೀಸರು ವಿನಯ್‌ಕುಮಾರ್‌ನನ್ನು ಬಂಧಿಸಿ ಠಾಣೆಗೆ ಕರೆತಂದಿದ್ದರು.

ಪಾನಮತ್ತನಾಗಿದ್ದ ಆತನನ್ನು ವಿಚಾರಿಸಿದಾಗ ದೀಪಕ್ ಮತ್ತು ನಂದೀಶ್ ನಕಲಿ ಪತ್ರಕರ್ತರೆಂದು, ತಾನು ಇನ್‌ಸ್ಪೆಕ್ಟರ್ ಅಲ್ಲವೆಂದೂ, ಪೊಲೀಸರು ತಡೆದರೆ ತೋರಿಸುವಂತೆ ಕೊಟ್ಟಿದ್ದ ತನ್ನ ಐಡಿ ಕಾರ್ಡ್ ಕೂಡ ನಕಲಿ ಎಂದು ವಿನಯ್‌ಕುಮಾರ್ ತಪ್ಪೊಪ್ಪಿಕೊಂಡಿದ್ದಾನೆ. ಇವರೆಲ್ಲರನ್ನೂ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ಆನೇಕಲ್ ಠಾಣೆಗೆ ಭೇಟಿ ನೀಡಿದ್ದ ಡಿವೈಎಸ್‌ಪಿ ಮಹದೇವಪ್ಪ, ಇನ್‌ಸ್ಪೆಕ್ಟರ್ ಕೃಷ್ಣ ಲಮಾಣಿ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದರು.

ವಾಹನಗಳ ಮೇಲೆ ಪ್ರೆಸ್ ಎಂದು ಬೋರ್ಡ್ ಹಾಕಿಕೊಂಡು ಓಡಾಡುವವರ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ. ಯಾರಾದರೂ ಸಿಕ್ಕಿಬಿದ್ದರೆ ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡಿಸಲಾಗುವುದು. ಮಹದೇವಪ್ಪ, ಡಿವೈಎಸ್‌ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net