

ರಾಯಚೂರು: ನಗರದ ಪ್ರಮುಖ ರಸ್ತೆಗಳಲ್ಲಿನ ಪಾದಾಚಾರಿ ರಸ್ತೆಗಳ ಒತ್ತುವರಿ ತೆರವುಗೊಳಿಸಬೇಕು. ಬಡಾವಣೆಗಳಲ್ಲಿ ಬೀದಿ ದೀಪ ಅಳವಡಿಸುವಂತೆ ಮೂಲ ನಿವಾಸಿ ಅಂಬೇಡ್ಕರ್ ಸಂಘ ಒತ್ತಾಯಿಸಿದೆ.
ಸಂಘದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಶುಕ್ರವಾರ ಮನವಿ ಸಲ್ಲಿಸಿ, ನಗರದ ಪ್ರಮುಖ ರಸ್ತೆ ಮತ್ತು ಬಡಾವಣೆಗಳಲ್ಲಿ ಬೀದಿದೀಪಗಳಿಲ್ಲದೆ ಜನರು ಕತ್ತಲೆಯಲ್ಲಿ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಸ್ಥಳೀಯ ಸ್ಟೇಷನ್ ರಸ್ತೆ, ಮಂತ್ರಾಲಯ ರಸ್ತೆ, ಲಿಂಗಸುಗೂರು ರಸ್ತೆ, ಗದ್ವಾಲ್ ರಸ್ತೆ, ಚಂದ್ರವೌಳೇಶ್ವರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರಿಗಳು ಪಾದಾಚಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿದ್ದರಿಂದ ಜನರು ಓಡಾಡಲು ಸಮಸ್ಯೆ ಎದುರಿಸುವಂತಾಗಿದೆ.
ಪಾದಾಚಾರಿ ರಸ್ತೆ ಅತಿಕ್ರಮಣದಿಂದ ಪ್ರಾಯಾಣಿಕರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಓಡಾಡಲು ತೊಂದರೆಯಾಗುತ್ತಿದೆ. ಕೂಡಲೇ ಪಾದಾಚಾರಿ ರಸ್ತೆ ಒತ್ತುವರಿ ತೆರವುಗೊಳಿಸಬೇಕು. ಬೀದಿ ದೀಪ ಅಳವಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ಭರತಕುಮಾರ, ಪದಾಕಾರಿಗಳಾದ ಹನುಮೇಶ ಕೊಲಮಿ, ಶಿವಶಂಕರ ಮನ್ಸಲಾಪುರ, ರಾಜು ರಾಂಪುರ, ಉಮೇಶ, ಮದನ್, ಶಿವರಾಜ, ರಾಕೇಶ, ಮಲ್ಲೇಶ, ಆಂಜಿನೇಯ, ವೀರೇಶ, ಸುರೇಶ, ಹೈದರ್, ರಾಕೇಶ ಇದ್ದರು.