ಪಾದಯಾತ್ರೆಯಿಂದ ರಾಜಕೀಯ ಲಾಭವಿದೆ: ಸಿದ್ದರಾಮಯ್ಯ

siddaramaiah-1575368166
Published on

ಮೈಸೂರು: ಸ್ವಾತಂತ್ರ್ಯ ನಂತರ ಯಾವುದೇ ಪಕ್ಷ, ನಾಯಕ ಮಾಡದ ಪಾದಯಾತ್ರೆಯನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಆದ್ದರಿಂದ ಪಾದಯಾತ್ರೆ ಮೈಸೂರಿಗೆ ಬಂದ ವೇಳೆ ಹೆಚ್ಚಿನ ಜನರನ್ನು ಸೇರಿಸಿ ಯಶಸ್ವಿಗೊಳಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಮುಂದಿನ ಆರು ತಿಂಗಳಲ್ಲಿ ಚುನಾವಣೆ ಬರುವುದರಿಂದ ಪಾದಯಾತ್ರೆಯಿಂದ ನಮಗೆ ರಾಜಕೀಯ ಲಾಭ ಇದೆ. ರಾಹುಲ್ ಗಾಂಧಿ ಮೈಸೂರು-ಚಾಮರಾಜನಗರ ಜಿಲ್ಲೆಗಳಿಗೆ ಬಂದಾಗ ಹೆಚ್ಚು ಜನರನ್ನು ಸೇರಿಸಿದರೆ ಅದು ನಿಮಗೂ ಲಾಭ ಆಗುತ್ತದೆ. ಈ ಐತಿಹಾಸಿಕ ಪಾದಯಾತ್ರೆ ಯಶಸ್ವಿಗೊಳಿಸಬೇಕು ಎಂದು ಹೇಳಿದರು.
ಬಹುಮತ ಇದೆ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ಮತಾಂತರ ನಿಷೇಧ ಮಸೂದೆ ಅಂಗೀಕರಿಸಿ ಜಾರಿಗೊಳಿಸಲು ಮುಂದಾಗಿದೆ. ಇದು ಸಂವಿಧಾನದಲ್ಲಿ ಕೊಟ್ಟಿರುವ ಧರ್ಮ ಪಾಲನೆ ಮಾಡುವ ಹಕ್ಕನ್ನು ಕಿತ್ತುಕೊಂಡಂತಾಗಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಮಾಡಿದ ಕಾನೂನು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅವರ 8 ವರ್ಷಗಳ ಆಡಳಿತದಲ್ಲಿ ತಳ ಸಮುದಾಯದ, ಮಧ್ಯಮ ವರ್ಗದ ಜನರು ನೆಮ್ಮದಿಯಾಗಿಲ್ಲ. ಧರ್ಮ ರಾಜಕಾರಣದ ಮೂಲಕ ದೇಶವನ್ನು ಒಡೆಯಲಾಗುತ್ತಿದೆ, ಸಮಾಜದಲ್ಲಿ ಶಾಂತಿ ಇಲ್ಲವಾಗಿದೆ. ಯಾವುದೇ ಧರ್ಮದ ಆಧಾರದಲ್ಲಿ ದೇಶ ಇಲ್ಲ. ನಾವೆಲ್ಲ ಮನುಷ್ಯರು ಮನುಷ್ಯರಾಗಿ ಬಾಳಬೇಕು ಎಂದರು.
ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ ಆಡಳಿತದಲ್ಲಿದೆ. ಭಾರತ ಸರ್ಕಾರದಲ್ಲೂ ಭ್ರಷ್ಟಾಚಾರ ಇದೆ. ಇದು ನಾಚಿಕೆಗೇಡು. ಮಾನ ಮರ್ಯಾದೆ ಗೌರವ ಏನೂ ಇಲ್ಲ. ನಾಚಿಕೆಗೆಟ್ಟ ಜನ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net