ಪಾದಯಾತ್ರೆಯತ್ತ ಬಿಜೆಪಿ ಕಾರ್ಯಕರ್ತರ ಪಯಣ

BJP
Published on

ಚಿತ್ರದುರ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ, ಮುಡಾ ನಿವೇಶನ ಹಂಚಿಕೆ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬೆಂಗಳೂರಿನಿಂದ ಮೈಸೂರು ಚಲೋ ಆರಂಭಿಸಿರುವ ಬಿಜೆಪಿ-ಜೆಡಿಎಸ್ ನಾಯಕರ ಪಾದಯಾತ್ರೆಯಲ್ಲಿ ಪಾಲ್ಗೊಂಡು, ಬೆಂಬಲಿಸಲು ನಗರದ ಒನಕೆ ಓಬವ್ವ ವೃತ್ತದಿಂದ ಬಿಜೆಪಿ ಮುಖಂಡರು, ಕಾರ್ಯಕತರು ಭಾನುವಾರ ಪ್ರಯಾಣ ಬೆಳೆಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ, ಎಸ್ಸಿ-ಎಸ್ಟಿ ಸಮುದಾಯಗಳ ಪ್ರಗತಿಗೆ ಬಳಸಬೇಕಾದ ಅನುದಾನವನ್ನು ರಾಜ್ಯದ ಸಿಎಂ ಅನ್ಯ ಉದ್ದೇಶಗಳಿಗೆ ಬಳಸಿದ್ದಾರೆ. ಅಲ್ಲದೆ, ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಅಕ್ರಮವಾಗಿ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ. ಮುಡಾ ನಿವೇಶನ ಹಂಚಿಕೆಯ ಹಗರಣದಲ್ಲೂ ಸಿಲುಕಿದ್ದಾರೆ. ಈ ಆರೋಪಗಳ ಹಿನ್ನಲೆಯಲ್ಲಿ ನಮ್ಮ ನಾಯಕರು ಪಾದಯಾತ್ರೆ ಹಮ್ಮಿಕೊಂಡಿದ್ದು, ಬೆಂಬಲಿಸಲಿದ್ದೇವೆ ಎಂದರು.

ಆರೋಪ ಬಂದ ಕೂಡಲೇ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ, ಅದರಿಂದ ಮುಕ್ತರಾದ ಬಳಿಕವೇ ಸಿಎಂ ಸ್ಥಾನ ಅಲಂಕರಿಸುತ್ತೇನೆ ಎನ್ನುವ ಬದಲು ಕುರ್ಚಿಗೆ ಅಂಟಿಕೊಂಡಿದ್ದಾರೆ. ಪಾದಯಾತ್ರೆ ಮುಗಿಯುವುದರೊಳಗೆ ರಾಜೀನಾಮೆ ಸಲ್ಲಿಸಲಿ ಎಂದು ಒತ್ತಾಯಿಸಿದರು.

ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ಪದಾಧಿಕಾರಿಗಳು, ಕಾರ್ಯಕರ್ತರು ಹೊರಟಿದ್ದು, 1 ಸಾವಿರಕ್ಕೂ ಹೆಚ್ಚು ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಡದಿಯಿಂದ ಸೇರಿಕೊಳ್ಳಲಿದ್ದೇವೆ ಎಂದರು.

ವಿಧಾನಸಭೆ ಅಧಿವೇಶನದಲ್ಲಿ ಮುಡಾ ಹಗರಣ ಚರ್ಚಿಸಲು ಸ್ಪೀಕರ್ ಯು.ಟಿ.ಖಾದರ್ ಅವಕಾಶ ಕೊಡಲಿಲ್ಲ. ಸಿಎಂ ಕುರ್ಚಿಯಿಂದ ಕೆಳಗಿಳಿಯುವತನಕ ಹೋರಾಟ ನಿಲ್ಲದು. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ ಭರವಸೆ ಈಡೇರಿಸಲು ಆಗದೆ, ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಾದ ಅನುದಾನ ದುರ್ಬಳಕೆಗೆ ಮುಂದಾಗಿದ್ದಾರೆ. ಯಾವ ಕಾರಣಕ್ಕೂ ಈ ಸಮುದಾಯಗಳು ಸಹಿಸುವುದಿಲ್ಲ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಜಿ.ಟಿ.ಸುರೇಶ್ ಸಿದ್ಧಾಪುರ, ಸಂಪತ್ ಕುಮಾರ್, ಮಾಧುರಿ ಗಿರೀಶ್, ನವೀನ್ ಚಾಲುಕ್ಯ, ಕಲ್ಲೇಶಯ್ಯ, ದಗ್ಗೆ ಶಿವಪ್ರಕಾಶ್, ಶರತ್ ಪಾಟೀಲ್, ಕಿರಣ್, ಚಂದ್ರಿಕಾ ಲೋಕನಾಥ್, ಕವನಾ, ಕಾಂಚನಾ, ಸುಮಾ, ವೀಣಾ, ಶೀಲಾ, ಸರಸ್ವತಿ, ಮಮತಾ, ಪೂರ್ಣಿಮಾ, ರಾಜೇಶ್ವರಿ, ಶಾಂತಮ್ಮ, ರಜಿನಿ, ಬಸಮ್ಮ, ಭಾರತಿ, ಶ್ರೀನಿವಾಸ್, ಪ್ರವೀಣ್, ಶಂಭು, ವೆಂಕಟೇಶ್, ನಾಗರಾಜ್, ರಾಘವೇಂದ್ರ, ಯಶವಂತ್, ಪ್ರವೀಣ್, ಲೋಕೇಶ್, ಪ್ರಕಾಶ್, ಸಾರಂಗ ಮಠ ಪ್ರಸಾದ್, ಬಾಬು, ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net