ಪಾದಚಾರಿ ಮೇಲೆ ಆಕಳು ಭೀಕರ ದಾಳಿ

h7-Cow 1
Published on

ಹುಬ್ಬಳ್ಳಿ: ಬೈಕ್ ತಗುಲಿ ಆಯ ತಪ್ಪಿ ಬಿದ್ದ ಪಾದಚಾರಿಯೊಬ್ಬರ ಮೇಲೆ ಆಕಳು ದಾಳಿ ಮಾಡಿ ಕೆಲವು ಕ್ಷಣ ಆತಂಕ ಮೂಡಿಸಿದ ಘಟನೆ ಇಲ್ಲಿಯ ಜವಳಿ ಸಾಲಿನಲ್ಲಿ ಸೋಮವಾರ ಸಂಭವಿಸಿದೆ.

ಕೈಯಲ್ಲಿ ಚೀಲ ಹಿಡಿದುಕೊಂಡು ಇಳಿ ವಯಸ್ಸಿನ ವ್ಯಕ್ತಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಅದೇ ಮಾರ್ಗವಾಗಿ ದನ ಕರುಗಳು ಸಹ ಹೋಗುತ್ತಿದ್ದವು. ಅವುಗಳನ್ನು ದಾಟುವಾಗ ಆಕಳು ಇರಿಯಲು ಬಂದಂತೆ ಮಾಡಿತು. ಪಾದಚಾರಿ ಸರಿದುಕೊಳ್ಳುತ್ತಿದ್ದಂತೆ ಹಿಂದಿನಿಂದ ಬಂದ ಬೈಕ್ ಗುದ್ದಿತು. ಆಯ ತಪ್ಪಿದ ಪಾದಚಾರಿ ನೆಲಕ್ಕೆ ಬಿದ್ದರು. ಆಕಳು ದಿಢೀರ್ ಆಗಿ ಆತನ ಮೇಲೆ ಎರಗಿ ನೆಲಕ್ಕೆ ಹಾಕಿ ತಿವಿಯಿತು. ಪಾದಚಾರಿ ತಪ್ಪಿಸಿಕೊಳ್ಳಲು ಯತ್ನಿಸಿದರೂ ಆಕಳು ಸುಲಭದಲ್ಲಿ ಬಿಡಲಿಲ್ಲ.

ಸಮೀಪದಲ್ಲಿದ್ದ ಇನ್ನೊಬ್ಬ ವ್ಯಕ್ತಿ ಆಕಳಿನ ದಾಳಿಯಿಂದ ಪಾದಚಾರಿಯನ್ನು ತಪ್ಪಿಸಲು ಯತ್ನಿಸಿದ. ಆಕಳು ಆತನನ್ನೂ ಅಟ್ಟಿಸಿಕೊಂಡು ಬಂತು. ಅಷ್ಟರಲ್ಲಿ ಮೇಲಕ್ಕೇಳಲು ಯತ್ನಿಸಿದ್ದ ಪಾದಚಾರಿ ಮೇಲೆ ಪುನಃ ದಾಳಿ ಮಾಡಿ ಕೆಡವಿಕೊಂಡು ಕೊಂಬುಗಳಿಂದ ತಿವಿಯಲು ಯತ್ನಿಸಿತು. ಕೆಲವರು ಆಕಳಿನ ಮುಖಕ್ಕೆ ನೀರು ಉಗ್ಗಿ, ಕೂಗಿ ಹೆದರಿಸಿದರು. ಇನ್ನೊಬ್ಬ ಸಲಿಕೆ ಹಿಡಿದು ಬಂದು ದನಗಳನ್ನು ಓಡಿಸಿದನು. ಹೀಗಾಗಿ ನೆಲಕ್ಕೆ ಬಿದ್ದ ಪಾದಚಾರಿ ಬಚಾವಾದರು. ಈ ಎಲ್ಲ ದೃಶ್ಯಗಳು ಅಲ್ಲಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net