ಪಾದಚಾರಿ ಮಾರ್ಗಕ್ಕೆ ಸಮೀಕ್ಷೆ ಶೀಘ್ರ

Govt Employees Association photo
Published on


ಬೀದರ್: ನಗರದ ಮೈಲೂರು ಕ್ರಾಸ್‍ನಿಂದ ಅಮಲಾಪುರ ರಸ್ತೆವರೆಗೆ ಪಾದಚಾರಿ ಮಾರ್ಗ ನಿರ್ಮಿಸಲು ಶೀಘ್ರ ಸಮೀಕ್ಷೆ ನಡೆಸಲಾಗುವುದು ಎಂದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ್ ಹೇಳಿದರು.

ನಗರದಲ್ಲಿ ತಮ್ಮನ್ನು ಭೇಟಿ ಮಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಅವರ ಮನವಿಗೆ ಸ್ಪಂದಿಸಿ ಅವರು ಈ  ಭರವಸೆ ನೀಡಿದರು. ಸಮೀಕ್ಷೆ ನಂತರ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು. ಅನಂತರ ಅಗತ್ಯ ಅನುದಾನ ಒದಗಿಸಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರ ಮೈಲೂರು ಕ್ರಾಸ್‍ನಿಂದ ಅಮಲಾಪುರ ರಸ್ತೆವರೆಗೆ ಶರವೇಗದಲ್ಲಿ ಬೆಳೆದಿದೆ. ನೂರಾರು ಅಂಗಡಿ- ಮುಂಗಟ್ಟು, ಪೆಟ್ರೋಲ್ ಬಂಕ್, ಶೋ ರೂಂಗಳು ತೆರೆದುಕೊಂಡಿವೆ. ಬಹಳಷ್ಟು ಸರ್ಕಾರಿ ನೌಕರರು ಈ ಪ್ರದೇಶದಲ್ಲಿಯೇ ವಾಸವಾಗಿದ್ದಾರೆ ಎಂದು ರಾಜೇಂದ್ರಕುಮಾರ ಗಂದಗೆ ಗಮನ ಸೆಳೆದರು.

ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಕಾರಣ ಪಾದಚಾರಿಗಳು ಭಯದಲ್ಲಿ ನಡೆದುಕೊಂಡು ಹೋಗುವಂತಹ ಸ್ಥಿತಿ ಇದೆ ಎಂದು ತಿಳಿಸಿದರು.

ಪಾದಚಾರಿ ಮಾರ್ಗ ನಿರ್ಮಿಸಿ ಉತ್ತಮ ಆರೋಗ್ಯಕ್ಕಾಗಿ ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕೆ ಹೋಗುವ ನೌಕರರು ಹಾಗೂ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು ಎಂದು ಕೋರಿದರು.

ಈ ಹಿಂದೆ ಆಶ್ವಾಸನೆ ನೀಡಿದಂತೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಬೇಕು. ಮೈಲೂರು ಕ್ರಾಸ್ ಹಾಗೂ ಗುಂಪಾ ರಿಂಗ್ ರಸ್ತೆ ಸಮೀಪ ಸಮುದಾಯ ಶೌಚಾಲಯ ನಿರ್ಮಿಸಬೇಕು. ಹಿರಿಯರಿಗೆ ವಿಶ್ರಾಂತಿ ಪಡೆಯಲು ಅಲ್ಲಲ್ಲಿ ಸಿಮೆಂಟ್ ಆಸನಗಳನ್ನು ಅಳವಡಿಸಬೇಕು ಎಂದು ಬೇಡಿಕೆ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net