

ನಾಪೋಕ್ಲು: ಕೊಡಗಿನ ಸುಗ್ಗಿಹಬ್ಬವಾದ ಹುತ್ತರಿ (ಧಾನ್ಯಲಕ್ಷ್ಮೀ) ಹಬ್ಬವನ್ನು ಕಕ್ಕಬ್ಬೆಯ ಶ್ರೀಪಾಡಿ ಇಗ್ಗತಪ್ಪ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜಿಲ್ಲೆಯಲ್ಲಿ ಮೊಟ್ಟ ಮೊದಲು ಪಾಡಿ ಸನ್ನಿಧಿಯಲ್ಲಿ ಹಬ್ಬ ಆಚರಿಸುವ ಸಂಪ್ರದಾಯ ಹಿಂದಿನಿಂದಲೂ ನಡೆದು ಬಂದಿದೆ.
ಸಂಪ್ರದಾಯದಂತೆ ದೇವಾಲಯದ ಸುತ್ತಮುತ್ತಲ ಪೊಂಗೆರ, ಕನಿಯಂಡ, ಕೋಲೆಯಂಡ, ಬೊಳ್ಳನಮಂಡ ಮತ್ತು ಐರಿರ ಮನೆಯವರು ಹುತ್ತರಿ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಊರಿನವರು, ಪರವೂರಿನ ಭಕ್ತರೂ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಮುಖ ಈ ಐದು ಮನೆತನದ ಕುಟುಂಬದ ಹೆಣ್ಣು ಮಕ್ಕಳು ತಳಿಯತಕ್ಕಿ ಬೊಳಕ್‌ನೊಂದಿಗೆ ಬಂದು ದೇವಾಲಯಕ್ಕೆ ಪ್ರದಕ್ಷಿಣೆಗೈದರು. ಈ ವೇಳೆ ದುಡಿಕೊಟ್ಟ ಪಾಟ್ ತಂಡವೂ ಪಾಲ್ಗೊಂಡಿತ್ತು. ಹುತ್ತರಿ ಹಬ್ಬದ ಅಂಗವಾಗಿ ದೇವಾಲಯದಲ್ಲಿ ಪೊಂಗೇರ ಉಲ್ಲಾಸ್ ನಾಡಿನ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ತಳಿಯತಕ್ಕಿ ಬೊಳಕ್, ಡೋಲು, ಜಾಗಟೆಗಳ ನಿನಾದದೊಂದಿಗೆ ದೇವಾಲಯದ ಮುಕ್ಕಾಟಿ ಸುಬ್ರಮಣಿ ಅವರು ಬೆಳ್ಳಿಯ ಬಿಂದಿಗೆ ಹೊತ್ತು ಪೊಲಿ ಪೊಲಿಯೇ ಬಾ ಎಂಬ ಉದ್ಗೋಷ ಮತ್ತು ಪಟಾಕಿಗಳ ಮೊರೆತದೊಂದಿಗೆ ಪೊಂಗೇರ ಅಪ್ಪಣ್ಣ ಅವರ ಬಾಹುಬಲ್ಯ ಗದ್ದೆಗೆ ತೆರಳಲಾಯಿತು. ಗದ್ದೆಯಲ್ಲಿ ಕದಿರು ಕುಯ್ಯುವುದಕ್ಕೂ ಮೊದಲು ಸುಬ್ರಮಣಿ ಅವರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.
ಕದಿರುಕಟ್ಟಿ, ಹಾಲು, ತುಪ್ಪ ಬಿಟ್ಟು ಪ್ರಾರ್ಥನೆ ಸಲ್ಲಿಸಿ ಶುಭ ಮುಹೂರ್ತದಲ್ಲಿ ಸುಬ್ರಮಣಿ ಅವರು ಕದಿರು ಕುಯ್ದು ಬೆಳ್ಳಿಯ ಬಿಂದಿಗೆಯಲ್ಲಿ ತುಂಬಿಸಿ ತಲೆಯಲ್ಲಿ ಹೊತ್ತು ನಡೆದರು. ಈ ವೇಳೆ ಶುಭ ಸೂಚಕವಾಗಿ ಗುಂಡು ಹಾರಿಸಲಾಯಿತು. ಪಟಾಕಿಗಳ ಶಬ್ದ ಮುಗಿಲು ಮುಟ್ಟಿತು. ಪೊಲಿ ಪೊಲಿಯೇ ದೇವಾ ಎಂಬ ಉದ್ಘೋಷಗಳು ಮೊಳಗಿದವು.
ಅನಂತರ ಡೋಲು, ಜಾಗಟೆ, ಪೊಲಿ ಪೊಲಿಯೇ ದೇವಾ ಎಂಬ ಘೋಷದೊಂದಿಗೆ ಅಶ್ವತ್ಥಕಟ್ಟೆಗೆ ಪ್ರದಕ್ಷಿಣೆ ಹಾಕಿ ದೇವಾಲಯಕ್ಕೆ ಮರಳಿದರು. ಸನ್ನಿಧಿಗೆ ಪ್ರದಕ್ಷಿಣೆ ಬಂದು ಕದಿರನ್ನು ನಮಸ್ಕಾರ ಮಂಟಪದಲ್ಲಿಟ್ಟು ವಿಶೇಷ ಧಾನ್ಯಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಮುಖ್ಯ ಅರ್ಚಕ ಕುಶ ಭಟ್, ಜಗದೀಶ್, ಶ್ರೀಕಾಂತ್ ಹೆಬ್ಬಾರ್, ಗುರುಪ್ರಸಾದ್ ತಂಡ ಪೂಜೆ ನಡೆಸಿಕೊಟ್ಟಿತು. ಮೊದಲ ಕದಿರನ್ನು ಗರ್ಭಗುಡಿಯಲ್ಲಿ ಕಟ್ಟಿ, ಅನಂತರ ಇತರ ಗುಡಿಗಳಿಗೆ ಕಟ್ಟಲಾಯಿತು. ಅಲ್ಲದೆ, ನೆರೆದ ಭಕ್ತರಿಗೆ ಕದಿರು ವಿತರಿಸಲಾಯಿತು.
ಸಂಪ್ರದಾಯದಂತೆ ಪೊಂಗೆರ, ಕನಿಯಂಡ, ಕೋಲೆಯಂಡ, ಬೊಳ್ಳನಮಂಡ ಮತ್ತು ಐರಿರ ಕುಟುಂಬಗಳು ಅವರ ವರ ಮನೆಗೆ ಹಿಂತಿರುಗಿ ತಮ್ಮ ಗದ್ದೆಯಿಂದ ಕದಿರು ಕುಯ್ದು ಸಂಪ್ರದಾಯ ಪಾಲಿಸಿದರು. ವಿಶೇಷ ಪೂಜೆಯ ಬಳಿಕ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇ ದಾರ್ ಮಧುಕರ್, ಕಂದಾಯ ಪರಿವೀಕ್ಷಕ (ಆರ್.ಐ.)ರವಿಕುಮಾರ್, ಗ್ರಾಮಲೆಕ್ಕಿಗ ಜನಾರ್ದನ್, ಸ್ವಾತಿ, ದಾನೇಶ್ವರಿ, ಕಲಿಯಂಡ ಸಂಪನ್ ಅಯ್ಯಪ್ಪ, ಬಾಚಮಂಡ ಲವ ಚಿಣಪ್ಪ, ಕುಡಿಯರ ಮುತ್ತಪ್ಪ, ಊರಿನ, ಪರ ಊರಿನ ಭಕ್ತರು ಹಾಜರಿದ್ದರು.