

ತಿ.ನರಸೀಪುರ : ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ನಿರಂತರವಾಗಿ ಕ್ರೀಡಾಭ್ಯಾಸ ಮತ್ತು ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ದೇಹ ಸದೃಢಗೊಳ್ಳುವುದಲ್ಲದೆ, ಸದೃಢ ಮನಸ್ಸನ್ನು ಹೊಂದಬಹುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಹೇಳಿದರು.
ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಶುಕ್ರವಾರ ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಕ್ರೀಡಾ ಧ್ವಜಾರೋಹಣದ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಪಾಠಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನೀಡಬೇಕು. ಕ್ರೀಡಾಕೂಟಗಳು ವ್ಯಕ್ತಿಯ ವ್ಯಕ್ತಿತ್ವವನ್ನು ವಿಕಸನಗೊಳಿಸಲು ಸಹಕಾರಿಯಾಗಲಿದೆ ಎಂದರು.
ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಿ, ಉತ್ತಮವಾದ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಸರ್ಕಾರ ಪ್ರಾಥಮಿಕ, ಪ್ರೌಢ ಶಿಕ್ಷಣ, ಪದವಿಪೂರ್ವ ಹಾಗೂ ಪದವಿ ವ್ಯಾಸಂಗದ ಅವಧಿಯಲ್ಲಿಯೂ ಕ್ರೀಡಾಕೂಟಗಳನ್ನು ಪ್ರತಿ ವರ್ಷವೂ ಆಯೋಜಿಸಲಾಗುತ್ತದೆ. ಹಳ್ಳಿಗಾಡಿನ ಹಿನ್ನೆಲೆಯಿಂದ ಬಂದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿದ್ದಾರೆ. ಮುಂದಿನ ಭವಿಷ್ಯದಲ್ಲಿ ಬದುಕನ್ನು ಸಮರ್ಥವಾಗಿ ನಿಭಾಯಿಸಲು ಏಳುಬೀಳುಗಳನ್ನು ಕ್ರೀಡಾಕೂಟಗಳು ರೂಢಿಸಿಕೊಳ್ಳುವಂತೆ ಮಾಡಲಿವೆ ಎಂದು ಎಸ್.ಸಿ.ಶಿವಮೂರ್ತಿ ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಿ.ಸಿ.ಲಿಂಗರಾಜು ಮಾತನಾಡಿ, ಪಟ್ಟಣದಲ್ಲಿ ತಾಲೂಕಿನ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟವನ್ನು ಎರಡು ದಿನಗಳ ಕಾಲ ಆಯೋಜಿಸಲಾಗಿದೆ. ಕಾಲೇಜುಗಳ ವಿದ್ಯಾರ್ಥಿಗಳು ನಿಬಂಧನೆ ಹಾಗೂ ನಿಯಮಗಳ ಅನುಸಾರ ಪಂದ್ಯಗಳಲ್ಲಿ ಭಾಗವಹಿಸಬೇಕು. ಕ್ರೀಡಾಕೂಟದಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ. 23 ರಂದು ಗುಂಪು ಆಟಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
ನಿವೃತ್ತ ಪ್ರಾಂಶುಪಾಲ ಸೋಮಣ್ಣ, ದೈಹಿಕ ಶಿಕ್ಷಣ ಪರೀಕ್ಷಕ ಮರಿಸ್ವಾಮಿ, ಉಪನ್ಯಾಸಕರಾದ ಸೋಸಲೆ ಎನ್.ಜವರಯ್ಯ, ಪುಟ್ಟರಾಜು, ಸಿದ್ದಪ್ಪ, ಮಂಜುನಾಥ, ಜಯಪ್ಪ, ಸಿದ್ದೇಶ, ಮಲ್ಲೇಶ, ಮಹದೇವ, ಸುನಿಲ್ ಜಸ್ಟಿನ್, ಸುಮಿತ್ರಮ್ಮ, ಶಿವರಂಜಿನಿ, ವಿದ್ಯಾಲಕ್ಷ್ಮಿ, ಜಮುನಾ, ರಘು, ಶಂಕರ್ , ಮೇಘಾ, ರೂಪಶ್ರೀ, ಶುಭಮಣಿ, ನಂದಿನಿ, ನಂಜಮಣಿ, ರಮ್ಯಾ ಹಾಗೂ ಇತರರು ಇದ್ದರು.
ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸಿದ ದೈಹಿಕ ಶಿಕ್ಷಣ ಶಿಕ್ಷಕರು : ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಎಡತೋಳಿಗೆ ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸಿದರು. ಪದವಿ ಪೂರ್ವ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದಿರುವ ಸರ್ಕಾರದ ನೀತಿಯನ್ನು ಖಂಡಿಸಿದರು.
ಖೇಲೋ ಇಂಡಿಯಾ, ಫಿಟ್ ಇಂಡಿಯಾದಂತಹ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ದೈಹಿಕ ಶಿಕ್ಷಣ ಕ್ಷೇತ್ರವನ್ನು ಬಲಗೊಳಿಸಬೇಕು. ಇದರಿಂದ ಸದೃಢ ವಿದ್ಯಾರ್ಥಿಗಳನ್ನು ಬೆಳೆಸುವುದು ಸಾಧ್ಯವಾಗುತ್ತದೆ. ಭವಿಷ್ಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಮಾನವ ಸಂಪನ್ಮೂಲವಾಗಿ ರೂಪುಗೊಳ್ಳುತ್ತಾನೆ. ಪದವಿ ಪೂರ್ವ ವಿಭಾಗದಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರನ ಕಡ್ಡಾಯವಾಗಿ ನೇಮಕ ಮಾಡಿಕೊಳ್ಳಬೇಕೆಂದು ಸರ್ಕಾರವನ್ನು ದೈಹಿಕ ಶಿಕ್ಷಕರು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಸ್ನಾತಕೋತ್ತರ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದೇಶ್ವರ ಮಾತನಾಡಿ, ಸರ್ಕಾರ ಪ್ರಾಥಮಿಕ ಶಿಕ್ಷಣದಿಂದ ಪದವಿ ದೈಹಿಕ ಶಿಕ್ಷಣವನ್ನು ಪರಿಗಣಿಸಿ ಅಂಗೀಕರಿಸಿದೆ. ಆದರೆ ದೈಹಿಕ ಶಿಕ್ಷಣ ಕ್ಷೇತ್ರದ ಕಾರ್ಯಕ್ರಮಗಳನ್ನು ಯೋಜಿಸುವಾಗ, ಅನುಷ್ಠಾನಗೊಳಿಸುವಾಗ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಬಹುತೇಕ ಶಿಕ್ಷಣದ ಮೂಲ ಉದ್ದೇಶ ಸಾಧಿತವಾಗುತ್ತಿಲ್ಲ. ದೈಹಿಕ ಶಿಕ್ಷಣ ಶಿಕ್ಷಣದ ಅವಿಭಾಜ್ಯ ಅಂಗ ಎಂದು ಅಂಗೀಕರಿಸಿರುವ ಸರ್ಕಾರಗಳು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿ ಹಂತದವರೆಗೆ ದೈಹಿಕ ಶಿಕ್ಷಣ ಶಿಕ್ಷಕನನ್ನು ನೇಮಕ ಮಾಡಿಕೊಳ್ಳದಿರುವುದು ಮತ್ತು ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.