ಪಾಕ್ ಜಿಂದಾಬಾದ್ ದುಷ್ಕರ್ಮಿ ಬಂಧಿಸಿ

Abvp
Published on

ಚಿತ್ರದುರ್ಗ: ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿರುವುದನ್ನು ವಿರೋಧಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ದುಷ್ಕರ್ಮಿ ಯಾರೇ ಆಗಿದ್ದರೂ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೈಯದ್ ನಾಸೀರ್ ಹುಸೇನ್ ಗೆಲುವಿನ ವೇಳೆ ಅವರ ಬೆಂಬಲಿಗರು ಪಾಕಿಸ್ತಾನ ಜಿಂದಾಬಾದ್ ಎಂಬುದಾಗಿ ಕೂಗಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಸೇನ್ ಅವರಾಗಲಿ, ಪಕ್ಕದಲ್ಲಿದ್ದವರಾಗಲಿ ಈ ಘೋಷಣೆ ಕೂಗುವ ವೇಳೆ ತಡೆಯುವ ಪ್ರಯತ್ನ ಮಾಡಿಲ್ಲ. ಈ ಸಂಬಂಧ ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ. ನಿಮ್ಮ ಬೆಂಬಲ ದೇಶದ್ರೋಹಿಗಳಿಗಾ ಎಂದು ಪ್ರಶ್ನಿಸಿದರು.

ಹಿಂದಿನ ವಿಧಾನಸಭೆ ಚುನಾವಣೆ ಗೆಲುವಿನ ವೇಳೆಯೂ ಬೆಳಗಾವಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿ ಪಾಕಿಸ್ತಾನದ ಧ್ವಜವನ್ನು ದುಷ್ಕರ್ಮಿಗಳು ಹಾರಿಸಿದ್ದರು. ಈಗ ದೇಶದ್ರೋಹಿಗಳಿಗೆ ವಿಧಾನಸಭೆ ಪ್ರವೇಶಿಸಲು ಅವಕಾಶ ನೀಡಿರುವುದು ಆತಂಕಕಾರಿ ಬೆಳವಣಿಗೆ. ಕೂಡಲೇ ದೇಶದ್ರೋಹದ ಅಪರಾಧದ ಅಡಿ ಪ್ರಕರಣ ದಾಖಲಿಸಬೇಕು ಎಂದು ಸರ್ಕಾರಕ್ಕೆ ಕೋರಿದರು.

ನಗರ ಕಾರ್ಯದರ್ಶಿ ಆರ್.ಗೋಪಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸುದರ್ಶನ್ ನಾಯ್ಕ, ಮಹಿಳಾ ಪ್ರಮುಖ್ ಲಕ್ಷ್ಮಿ, ಸಹ ಪ್ರಮುಖ್ ಎಸ್. ಚಂದನ್, ಚಿತ್ರಸ್ವಾಮಿ, ಕಾರ್ಯಕರ್ತರಾದ ದರ್ಶನ್, ಸುವಜಿನ್, ಯುವರಾಜ್, ತಿಪ್ಪೇಶ್, ಸುದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net