ಪಾಕ್ ಜಿಂದಾಬಾದ್ ಘೋಷಣೆಗೆ ಖಂಡನೆ

Jatapati
Published on

ಚಿತ್ರದುರ್ಗ: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬುದಾಗಿ ಕಾಂಗ್ರೆಸ್‌ನ ಬೆಂಬಲಿಗರೇ ಕೂಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೈ ಕಚೇರಿಗೆ ಮುತ್ತಿಗೆ ಹಾಕಲು ಕಮಲ ಪಡೆಯ ಕಾರ್ಯಕರ್ತರು ಬ್ಯಾರಿಕೇಡ್ ದಾಟಲು ಯತ್ನಿಸಿದರು. ಇದೇ ವೇಳೆ ಪರಸ್ಪರ ವಿರುದ್ಧ ಘೋಷಣೆ, ಆರೋಪ-ಪ್ರತ್ಯಾರೋಪಕ್ಕೂ ಮುಂದಾದರು. ಬಿಜೆಪಿಗರನ್ನು ತಡೆದ ಪೊಲೀಸರೊಂದಿಗೆ ಮಾತಿನ ಚಕಮಕಿ, ತಳ್ಳಾಟವೂ ನಡೆಯಿತು.

ನಾಡಿನೊಳಗಿನ ದೇಶ ದ್ರೋಹಿಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ. ಇದಕ್ಕೆ ರಾಜ್ಯಸಭೆ ಸದಸ್ಯ ಸೈಯದ್ ನಾಸೀರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಘೋಷಣೆ ಕೂಗಿರುವುದಕ್ಕಿಂತ ನಿದರ್ಶನ ಬೇಕೆ ಎಂದು ಪ್ರಶ್ನಿಸಿದರು.

ಭ್ರಷ್ಟರು, ಭಯೋತ್ಪಾದಕರನ್ನು ಬೆಂಬಲಿಸುವುದು ಕಾಂಗ್ರೆಸ್ಸಿಗರರಿಗೆ ಹೊಸದೇನಲ್ಲ. ದೇಶ ಮತ್ತು ಹಿಂದು ವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಅನ್ನು ಬಿಟ್ಟಿ ಗ್ಯಾರಂಟಿ ನಂಬಿ ಅಧಿಕಾರಕ್ಕೆ ತಂದವರಿಗೆ ಸಲ್ಲುತ್ತದೆ ಎಂದು ಕಿಡಿಕಾರಿದರು.

ರಸ್ತೆಯಲ್ಲಿ ಕೂಗುತ್ತಿದ್ದವರು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಧ್ವನಿ ಎತ್ತುತ್ತಿದ್ದಾರೆ ಎಂದರೆ, ರಾಷ್ಟ್ರಕ್ಕೆ ಹೊರಗಿನವರಿಗಿಂತ ಒಳಗಿನ ಶತ್ರುಗಳ ಕುರಿತು ಎಚ್ಚರವಹಿಸಬೇಕಿದೆ ಎಂದರು.

ಕಾಂಗ್ರೆಸ್ ಕಾರ್ಯಕರ್ತರು ಕೂಡ ಭಾರತ್ ಮಾತಾ ಕೀ ಜೈ, ಕೋಮುವಾದಿ ಬಿಜೆಪಿಗೆ, ಅಶಾಂತಿ ಸೃಷ್ಟಿಸುವವರಿಗೆ ಧಿಕ್ಕಾರವೆಂದು ಘೋಷಣೆ ಕೂಗಿದರು. ಇದೇ ವೇಳೆ ಪರಸ್ಪರ ಮಾತಿನ ವಾಗ್ದಾಳಿ ತಾರಕ್ಕೇರಿತು. ಪ್ರತಿಭಟನೆ ಬೀದಿ ಜಗಳವಾಗಿ ಮಾರ್ಪಟ್ಟಿತು.

ನೆಲಕ್ಕುರುಳಿದ ಕಾರ್ಯಕರ್ತೆ: ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಹರಸಾಹಸಪಟ್ಟರು. ತಳ್ಳಾಟದ ವೇಳೆ ಮಹಿಳಾ ಕಾನ್ಸ್‌ಟೇಬಲ್ ಒಬ್ಬರು ಏಕಾಏಕಿ ನೂಕಿದ್ದರಿಂದ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಭಾರ್ಗವಿ ದ್ರಾವಿಡ್ ನೆಲಕ್ಕುರುಳಿದರು. ಪ್ರಜ್ಞೆ ತಪ್ಪಿದ ಅವರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.

ಬಿಜೆಪಿ ಮುಖಂಡರಾದ ನರೇಂದ್ರ ಹೊನ್ನಾಳ್, ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ, ರಾಮು, ನವೀನ್, ವೀಣಾ, ಶೀಲಾ, ಶೈಲಜಾರೆಡ್ಡಿ, ಪವನ, ಪರಶುರಾಮ್, ಪಲ್ಲವಿ, ರವಿ, ಪ್ರಭು ಇತರರಿದ್ದರು.

ಕಾಂಗ್ರೆಸ್ ಮುಖಂಡರಾದ ಹಾಲಸ್ವಾಮಿ, ಪ್ರಕಾಶ್‌ಮೂರ್ತಿ, ಎನ್.ಡಿ.ಕುಮಾರ್, ಮುದಸಿರ್, ನೇತಾಜಿ, ಲಕ್ಷ್ಮಿಕಾಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net