ಪಾಕಿಸ್ತಾನಿಗಳ ಗಡಿಪಾರು ಮಾಡುವಂತೆ ಮನವಿ

06rajesh3
Published on

ಚಾಮರಾಜನಗರ: ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿಯಿಂದ ದೇಶದ ನಾಗರೀಕರು ಆತಂಕಗೊಂಡಿದ್ದಾರೆ. ಈ ದುರಂತದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಂಧೂನದಿ ನೀರಿನ ಒಪ್ಪಂದವನ್ನು ರದ್ದುಗೊಳಿಸಿ, ಪಾಕಿಸ್ತಾನದ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿದೆ. ಅದಲ್ಲದೇ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳು ಹಿಂತಿರುಗುವಂತೆ ಕಟ್ಟಾಜ್ಞೆಯನ್ನು ಹೊರಡಿಸಿದೆ. ಈ ನಿಟ್ಟಿನಲ್ಲಿ ದೇಶದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅವರನ್ನು ಕೂಡಲೇ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರಿತಿಸಬೇಕು. ಅವರ ವೀಸಾಗಳು ರದ್ದಾಗಿವೆಯೇ ಅಥವಾ ಅಮಾನತ್ತಿನಲ್ಲಿ ಇದೆಯೇ ಎಂಬುದನ್ನು ಪತ್ತೆಹಚ್ಚಿ ಅಂತಹ ವ್ಯಕ್ತಿಗಳನ್ನು ಪಟ್ಟಿಮಾಡಬೇಕು. ಯಾವುದೇ ರೀತಿಯಲ್ಲೂ ವಿಳಂಬ ಮಾಡದೇ ಪಾಕಿಸ್ತಾನಿ ಪ್ರಜೆಗಳನ್ನು ಕಾನೂನಾತ್ಮಕವಾಗಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಅದರಂತೆ ಭಾರತೀಯ ಸೇನಾಪಡೆಗಳಿಗೆ ಸ್ವತಂತ್ರ ಅಧಿಕಾರವನ್ನು ನೀಡಿದ್ದಾರೆ. ನಮ್ಮ ಸೇನಾಪಡೆಗಳು ಉಗ್ರರನ್ನು ನಾಶ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ದೇಶದ ಹಿಂದೂಗಳು ಒಗ್ಗಟ್ಟಾಗಬೇಕಿದೆ ಎಂದು ಹೇಳಿದರು.

ಈ ವೇಳೆ ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ಆರ್.ಸುಂದರ್, ಚಾಮುಲ್ ಮಾಜಿ ಅಧ್ಯಕ್ಷ ವೈ.ಸಿ.ನಾಗೇಂದ್ರ, ಮುಖಂಡರಾದ ಬಾಲಸುಬ್ರಮ್ಮಣ್ಯಂ, ಕುಲಗಾಣ ಶಾಂತಮೂರ್ತಿ, ಮಂಡಲ ಅಧ್ಯಕ್ಷ ಶಿವರಾಜ್, ಸಿ.ಮಹದೇವಪ್ರಸಾದ್, ವೃಷಭೇಂದ್ರಸ್ವಾಮಿ, ಅನಿಲ್, ಟಗರಪುರ ರೇವಣ್ಣ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಆನಂದ್ ಭಗೀರಥ, ತಾ.ಪಂ ಮಾಜಿ ಅಧ್ಯಕ್ಷ ರವೀಶ್, ನಟರಾಜ್, ಶಿವಣ್ಣ, ರಾಮಸಮುದ್ರ ಶಿವಣ್ಣ, ವೇಣುಗೋಪಾಲ್, ಮುಕುಂದ, ಕೇಬಲ್ ರಂಗಸ್ವಾಮಿ, ಶ್ರೀನಿವಾಸ್ ಮೂರ್ತಿ, ಮುರುಗೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net