ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ: ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಪಾಕಿಸ್ತಾನಕ್ಕೆ ಜಿಂದಾಬಾದ್ ಘೋಷಣೆ: ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
Published on

ಹಾಸನ: ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಘೋಷಣೆ ಕೂಗಿದವರ ವಿರುದ್ಧ ನಿರ್ದಾಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದರು ಪ್ರತಿಭಟನೆ ನಡೆಸಿ ನಂತರ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಅವರನ್ನು ಬಂಧಿಸಿದ್ದರು
ವಿಧಾನಸೌಧದಲ್ಲಿ ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ನಾಸೀರ್ ಹುಸೇನ್ ನಂತರ ಕಾಂಗ್ರೆಸ್ ವಿಜಯೋತ್ಸವ ಆಚರಿಸುತ್ತಿದ್ದ ಸಂದರ್ಭದಲ್ಲಿ ಕೆಲ ಕಿಡಿಗೇರಿಗಳು ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಇಂತಹ ಸಮಾಜಘಾತಕ ಶಕ್ತಿಗಳು ವಿರುದ್ಧ ಸರ್ಕಾರ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ನೂತನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಪಕ್ಕದಲ್ಲೇ ವಿಧಾನಸೌಧದ ಒಳಾಂಗಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದಿರುವುದು ದೇಶವಿರೋಧಿ ನಡೆ. ಪಾಕಿಸ್ತಾನ್ ಜಿಂದಾಬಾದ್ ಎಂಬ ರಾಷ್ಟ್ರ ವಿದ್ರೋಹದ ಉಗ್ರ ಘೋಷಣೆ ಭಾರತದ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲೇ ಮೊಳಗಿದೆ ಎಂದರೆ ಕಾಂಗ್ರೆಸ್ ಇನ್ನೆಷ್ಟು ದೇಶ ಸುಡುವ ವಿಷಜಂತುಗಳನ್ನು ತನ್ನ ಮಡಿಲಲ್ಲಿ ಕಟ್ಟಿ ಕೊಂಡಿರಬಹುದು ಎಂದು ಅಂದಾಜಿಸಲು ಈ ಘಟನೆ ಸಾಕ್ಷಿ ಎಂದರು.
ಸೈಯದ್ ನಾಸೀರ್ ಹುಸೇನ್ ಹಿಂದೆ ಇರುವ ಬೆಂಬಲಿಗರು ಪಾಕಿಸ್ತಾನಿ ಬೆಂಬಲಿತ ಉಗ್ರರೇ ಇರಬೇಕು, ತಮ್ಮನ್ನು ರಕ್ಷಿಸಲು ತಮ್ಮದೇ ಮನಃಸ್ಥಿತಿಯ ಕಾಂಗ್ರೆಸ್ ಸರ್ಕಾರ ಇರುವಾಗ ನಾವ್ಯಾರಿಗೆ ಹೆದರಬೇಕು ಎಂಬ ದುಷ್ಟ ವರ್ತನೆಯಿಂದ ಘೋಷಣೆ ಕೂಗಿರುವ ದೇಶ ವಿರೋಧಿಗಳನ್ನು ಕೂಡಲೇ ಬಂಧಿಸಬೇಕು. ಹುಸೇನ್ ಅವರನ್ನು ರಾಜ್ಯಸಭಾ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ವೇಳೆ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಒಂದುಕಡೆ ರಾಹುಲ್‌ಗಾಂಧಿ ಅವರು ಜೋಡೋ ಯಾತ್ರೆ ಮಾಡುತ್ತಿದ್ದರೆ, ಇಲ್ಲಿ ಅವರದೇ ಪಕ್ಷದವರು ದೇಶ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಕುಕ್ಕರ್‌ನಲ್ಲಿ ಬಾಂಬ್ ಇಟ್ಟವರನ್ನು ಡಿ.ಕೆ.ಶಿವಕುಮಾರ್ ಅವರು ಸಹೋದರರು ಎನ್ನುತ್ತಾರೆ. ಹಿಂದೂಗಳನ್ನು ಕಗ್ಗೊಲೆ ಮಾಡಿದ ಪಿಎಫ್‌ಐ ಕಾರ್ಯಕರ್ತರನ್ನು ಇದೇ ಸಿಎಂ ಬಿಡುಗಡೆ ಮಾಡುತ್ತಾರೆ. ಈ ಎಲ್ಲ ಬೆಳವಣಿಗೆ ನೋಡಿದರೆ ಭಯೋತ್ಪಾದನೆಗೆ ಕಾಂಗ್ರೆಸ್ ಪಕ್ಷವೇ ಬೆಂಬಲ ನೀಡುತ್ತಿದೆ ಎಂಬ ಅನುಮಾನ ಮೂಡಿಸಿದೆ ಎಂದು ದೂರಿದರು.
ಡಿಸಿ ಕಚೇರಿಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿವರೆಗೂ ಮೆರವಣಿಗೆ ಹೊರಟ ಬಿಜೆಪಿ ಕಾರ್ಯಕರ್ತರು, ಡಿಸಿಸಿ ಎದುರು ಉಗ್ರ ಸಿದ್ದರಾಮಯ್ಯ, ಸಿದ್ರಾಮುಲ್ಲಾಖಾನ್ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಬಳಿಕ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ ನಡೆದು ಕಡೆಗೆ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್, ನಗರಸಭೆ ಮಾಜಿ ಅಧ್ಯಕ್ಷ ಆರ್.ಮೋಹನ್, ಸದಸ್ಯ ಸಂತೋಷ್, ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಪರ್ವತಯ್ಯ, ಮುಖಂಡರಾದ ಗಗನ್ ಗಾಂಧಿ, ಪ್ರಭಾಕರ್, ಚನ್ನಕೇಶವ, ಚಂದ್ರು, ನಾರಾಯಣಗೌಡ, ಅನೂಪ್ ರಾಜ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net