

ಹಾಸನ: ಪಹಲ್ಗಾಮ್ ನರಮೇಧದ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನ ವಿಚಾರದಲ್ಲಿ ಅತ್ಯಂತ ಕಠಿಣ ನಿರ್ಣಯಗಳನ್ನು ಕೈಗೊಂಡಿದ್ದಾರೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಕೇಂದ್ರ ಗೃಹ ಸಚಿವಾಲಯ ಪಾಕಿಸ್ತಾನಿ ಪ್ರಜೆಗಳ ಗಡಿಪಾರಿಗೆ ಆಜ್ಞಾಪತ್ರ ಹೊರಡಿಸಿದ್ದು, ಕೂಡಲೇ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಘಕಟದ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಜಮ್ಮು- ಕಾಶ್ಮೀರದಲ್ಲಿ ಪಾಕಿಸ್ತಾನದ ನೆರವಿನಿಂದ 26 ಜನ ಅಮಾಯಕ ಭಾರತೀಯ ಪ್ರಜೆಗಳನ್ನು ಉಗ್ರರು ಧರ್ಮವನ್ನು ಕೇಳಿ ತಿಳಿದು ಗುಂಡಿಕ್ಕಿ ಕೊಂದಿರುವುದನ್ನು ನೋಡಿ ಇಡೀ ದೇಶವೇ ದಿಗ್ಭ್ರಾಂತಗೊಂಡಿದೆ. ಈ ದಾರುಣವಾದಂತಹ ದಾಳಿಯನ್ನು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಾದ ಐಎಸ್‌ಐ ನೆರವಿನಿಂದಪಾಕಿಸ್ತಾನ ಸೇನೆ ಇಡೀ ದಾಳಿಯ ಯೋಜನೆಯನ್ನು ರೂಪಿಸಿದೆ. ಇಂತಹ ಬರ್ಬರ ಹತ್ಯಾಕಾಂಡದಿಂದ ಇಡೀ ದೇಶ ದೊಡ್ಡ ಆಘಾತಕ್ಕೊಳಗಾಗಿದೆ ಹಾಗೂ ಜಗತ್ತಿನ ಎಲ್ಲ ಶಕ್ತಿಶಾಲಿ ರಾಷ್ಟ್ರಗಳು ಭಾರತದ ಜತೆ ನಿಲ್ಲುವುದಾಗಿ ಘೋಷಿಸಿವೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ಕುಕೃತ್ಯಕ್ಕೆ ಕಾರಣರಾದವರು ಯಾರೇ ಆಗಿರಲಿ, ಜಗತ್ತಿನ ಯಾವುದೇ ಮೂಲೆಯಲ್ಲಿ ಅಡಗಿ ಕುಳಿತಿದ್ದರೂ ಅವರನ್ನು ಹಾಗೂ ಅವರಿಗೆ ಪ್ರೇರಣೆ ನೀಡಿದವರ ರುಂಡವನ್ನು ಚೆಂಡಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪ್ರಧಾನಿಗಳು ಭಾರತೀಯ ಸೇನಾ ಪಡೆಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಕ್ತ ಅನುಮತಿ ನೀಡಿದ್ದಾರೆ. ನಮ್ಮ ಸೇನಾ ಪಡೆಗಳು ಉಗ್ರರನ್ನು ನಾಶ ಮಾಡೇ ತೀರುತ್ತವೆ ಎಂಬ ದೃಡ ವಿಶ್ವಾಸವಿದೆ ಎಂದು ಹೇಳಿದರು.
ದೇಶದ ಇಡೀ 140 ಕೋಟಿ ಜನರು ಪ್ರಧಾನ ಮಂತ್ರಿ ಹಾಗೂ ಸೇನಾ ಪಡೆಗಳ ಜತೆಗೆ ತೊಡೆತಟ್ಟಿ ನಿಂತಿದ್ದಾರೆ. ಈ ದುರ್ಘಟನೆಯ ನಂತರದಲ್ಲಿ ಕೇಂದ್ರ ಸರ್ಕಾರವು ಸಿಂಧೂ ನದಿ ನೀರಿನ ಒಪ್ಪಂದಕ್ಕೆ ಇತಿಶ್ರೀ ಹಾಡಿ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ. ಹಾಗೆಯೇ ಪಾಕಿಸ್ತಾನಿ ಪ್ರಜೆಗಳ ಗಡಿಪಾರಿಗೆ ಕೂಡಲೇ ಕ್ರಮ ಕೈಗೊಳ್ಳುವುದು ಮಾತ್ರವಲ್ಲದೇ ಪಾಕಿಸ್ತಾನದೊಂದಿಗಿನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸಿ ಹಾಗೂ ಪಾಕಿಸ್ತಾನಿ ಪ್ರಜೆಗಳಿಗೆ ಭಾರತಕ್ಕೆ ಬರುವ ವೀಸಾ ನಿಲ್ಲಿಸಿದೆ ಹಾಗೂ ನಿಗದಿತ ಸಮಯದಲ್ಲಿ ಭಾರತರಲ್ಲಿರುವ ಎಲ್ಲ ಪಾಕಿಸ್ತಾನಿ ಪ್ರಜೆಗಳು ಹಿಂತಿರುಗುವಂತೆ ಕಟ್ಟಾಜ್ಞೆ ಹೊರಡಿಸಿದೆ. ಪಾಕಿಸ್ತಾನಿ ಪ್ರಜೆಗಳಿಗೆ ಭಾರತದ ವೀಸಾ ವಿತರಣೆಯನ್ನು ಅಮಾನತ್ತಿನಲ್ಲಿ ಇಡಲಾಗಿದೆ. ಈ ನಿಟ್ಟಿನಲ್ಲಿ (ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ) ನಮ್ಮ ಜಿಲ್ಲೆಯಲ್ಲಿರುವ ಅಕ್ರಮವಾಗಿ ನೆಲೆಸುತ್ತಿರುವ ಪಾಕಿಸ್ತಾನಿಗಳು, ಅಧಿಕೃತ ದಾಖಲಾತಿಗಳಿಲ್ಲದೇ ರದ್ದಾಗಿರುವ ವೀಸಾಗಳು ಹಾಗೂ ಅಮಾನತ್ತಿನಲ್ಲಿರುವ ವೀಸಾಗಳನ್ನು ಹೊಂದಿಕೊಂಡು ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಗಡಿಪಾರು ಮಾಡಬೇಕು ಎಂದು ಮನವಿ ಮಾಡಿದರು.
ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯ. ಹಾಗಾಗಿ ಅಂತಹ ವ್ಯಕ್ತಿಗಳನ್ನು ಪಟ್ಟಿಮಾಡಿ ಯಾವುದೇ ವಿಳಂಬ ಮಾಡದೇ ಈ ಕೂಡಲೇ ಎಲ್ಲ ಕಾನೂನು ಬದ್ಧವಾದ ಕ್ರಮವನ್ನು ಕೂಡಲೇ ತೆಗೆದುಕೊಳ್ಳಬೇಕಾಗಿದೆ ಎಂದು ಕೋರಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ಮುಖಂಡರಾದ ಶೋಭನ್ ಬಾಬು, ಎಚ್.ಎನ್. ನಾಗೇಶ್, ಚನ್ನಕೇಶವ, ಹರ್ಷಿತ್, ವೇದಾವತಿ, ಬಿಜೆಪಿ ಸಂಘಟನಾ ಪರ್ವ ಜಿಲ್ಲಾ ಸಂಚಾಲಕ ರಾಜಕುಮಾರ್ ಇತರರು ಪಾಲ್ಗೊಂಡಿದ್ದರು.