ಪಾಂಡ್ರೆ-ಚಿಮಕೋಡೆಗೆ ಸಿಜಿಕೆ ರಂಗ ಪ್ರಶಸ್ತಿ

cgk award
Published on

ಬೀದರ್: ಕರ್ನಾಟಕ ಬೀದಿನಾಟಕ ಅಕಾಡೆಮಿ ಕೊಡಮಾಡುವ ಸಿಜಿಕೆ ರಂಗ ಪ್ರಶಸ್ತಿಯನ್ನು ಜಿಲ್ಲೆಯ ಹಿರಿಯ ರಂಗ ಕಲಾವಿದ ನಾಗೇಂದ್ರ ಪಾಂಡ್ರೆ (2022ನೇ ಸಾಲಿನ ಪ್ರಶಸ್ತಿ) ಹಾಗೂ ದೇವಿದಾಸ ಚಿಮಕೋಡೆ (2023ನೇ ಸಾಲಿನ) ಅವರಿಗೆ ಪ್ರದಾನ ಮಾಡಲಾಯಿತು.
ನಗರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ನಾಟಕ ಕೇವಲ ಕಲೆಯಲ್ಲ. ಅದು ಜೀವಪರ ಚಿಂತನೆಯೊಳಗೆ ಬೆರೆತು ಹೋಗಿದೆ. ಸಿನಿಮಾ, ದೂರದರ್ಶನದಂಥ ಬಹುಸಂಖ್ಯೆಯ ದೊಡ್ಡ ಅಲೆಯ ಮುಂದೆ ತನ್ನತನವನ್ನು ಉಳಿಸಿಕೊಂಡು ನಾಟಕ ಬಂದಿದೆ ಎಂದು ಹೇಳಿದರು.
ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವ ಜಿಲ್ಲೆಯ ಇಬ್ಬರು ಹಿರಿಯ ಕಲಾವಿದರನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಖುಷಿ ತಂದಿದೆ. ನಿರಂತರ ಕಾರ್ಯಚಟುವಟಿಕೆಗಳು ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜಾನಪದ ಕಲೆಗಳು ಜೀವಂತ ಇವೆ. ಇವುಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿ ನಾಗೇಂದ್ರ ಪಾಂಡ್ರೆ, ದೇವಿದಾಸ ಚಿಮಕೋಡೆ ಮಾತನಾಡಿದರು. ಜಾನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ, ಪ್ರಮುಖರಾದ ಸುನೀಲ ಭಾವಿಕಟ್ಟಿ, ಪ್ರದೀಪ ಬಿರಾದಾರ್, ವಿಜಯಕುಮಾರ ಅಷ್ಟೂರೆ, ಪೃಥ್ವಿರಾಜ ಎಸ್., ಸುನೀಲಕುಮಾರ ಕುಲಕರ್ಣಿ, ಚಂದ್ರಕಾಂತ ಹಳ್ಳಿಖೇಡಕರ್, ಮಹೇಶ ಕೋಲಿ, ಸಂತೋಷ ಹೊನ್ನಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net