

ಬೀರೂರು: ಪಟ್ಟಣದ ಕರಗಲ್ ಬೀದಿಯ ಪಾಂಡುರಂಗ ರುಕುಮಾಯಿ ದೇವಾಲಯದಲ್ಲಿ ಬುಧವಾರ 83ನೇ ವರ್ಷದ ದಿಂಡಿ ಉತ್ಸವ ಸಂಭ್ರಮದಿಂದ ನೆರವೇರಿತು.
ದಿಂಡಿ ಉತ್ಸವ ಅಂಗವಾಗಿ ಮಂಗಳವಾರ ಬೆಳಗ್ಗೆ ದೇವಾಲಯದಲ್ಲಿ ಸ್ವಾಮಿಯ ಉತ್ಸವಮೂರ್ತಿಗೆ ಸಾರ್ವತ್ರಿಕ ಅಭಿಷೇಕ, ಸಹಸ್ರ ನಾಮಾರ್ಚನೆ, ತೀರ್ಥ ಪ್ರಸಾದ ವಿನಿಯೋಗ, ನೂತನ ಕೊಠಡಿಗಳ ಉದ್ಘಾಟನೆ ಹಾಗೂ ಪುರುಷ ಸೂಕ್ತಪೂರ್ವಕ ಹೋಮ ಮೊದಲಾದ ಕಾರ್ಯಕ್ರಮಗಳು ನಡೆದವು. ಎಸ್ಪಿ ಡಾ. ವಿಕ್ರಮ್ ಅಮಟೆ ಭಾಗವಹಿಸಿದ್ದರು.
ಸಾಯಂಕಾಲ ಪೋತಿಸ್ಥಾಪನೆ, ಶಿವಮೊಗ್ಗದ ವಿಠಲ್ ರಾವ್ ತೇಲ್ಕರ್ ಅವರಿಂದ ಪ್ರವಚನ, ಹನುಮಂತರಾವ್ ರಂಗದೋಳ್ ಮತ್ತು ತಂಡದವರಿಂದ ಪಂಢರಿ ಸಾಂಪ್ರದಾಯಿಕ ಕೀರ್ತನೆ, ರಾತ್ರಿ ಬೀರೂರಿನ ಜನಾಬಾಯಿ ಭಜನಾ ಮಂಡಳಿ ಮತ್ತು ಶಿವಮೊಗ್ಗದ ಭವಾನಿ ಮಹಿಳಾ ಮಂಡಳಿಯಿಂದ ಏಕಕಾಲ ಪಂಚಪದಿ ಪಾವೂಲ್ ಭಜನೆ ನಡೆಯಿತು. ನಂತರ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದೆ ಮೇಘಾ ಅವರಿಂದ ಸಂತವಾಣಿ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ, ಮತ್ತು ಜಾಗರಣೆ ನೆರವೇರಿತು.
ಬುಧವಾರ ಬೆಳಗ್ಗೆ ವಿಠಲ ರುಕುಮಾಯಿ ಅವರ ರಾಜಬೀದಿ ಉತ್ಸವ, ತುಕಾರಾಮ್ ರಂಗದೋಳ್ ತಂಡದವರಿಂದ ಕಾಲ ಕೀರ್ತನೆ, ಮಹಿಳಾ ಮಂಡಳಿ ಅವರಿಂದ ಸಂತಪೂಜೆ, ಭಾರೋಡ್ ಕಾರ್ಯಕ್ರಮ, ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು. ಆ.9ರಂದು ಬೆಳಗ್ಗೆ ಸತ್ಯನಾರಾಯಣ ಸ್ವಾಮಿ, ಗೋಪಾಲ ಕಾಲಾ ಕಾರ್ಯಕ್ರಮ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಕಾರ್ಯಕ್ರಮಗಳೊಂದಿಗೆ ದಿಂಡಿ ಉತ್ಸವಕ್ಕೆ ತೆರೆಬೀಳಲಿದೆ. ಕೃಷ್ಣಪ್ರಸಾದ್ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೇವಾಲಯದಲ್ಲಿ 4 ದಶಕಗಳಿಗೂ ಹೆಚ್ಚು ಕಾಲ ಅರ್ಚಕರಾಗಿ ಕಾರ್ಯ ನಿರ್ವಹಿಸಿದ ಎಂ.ವಿ.ಕೃಷ್ಣಮೂರ್ತಿ ದಂಪತಿಯ ಭಾವಚಿತ್ರ ಅನಾವರಣಗೊಳಿಸಿ ಗೌರವ ಸಲ್ಲಿಸಲಾಯಿತು.
ಗೌರವಾಧ್ಯಕ್ಷ ಪಾಂಡುರಂಗರಾವ್ ಜಿಂಗಾಡೆ, ಅಧ್ಯಕ್ಷ ವಿನಾಯಕ್ ಬಾಂದ್ರೆ, ಉಪಾಧ್ಯಕ್ಷ ಕುಮಾರರಾವ್, ಕಾರ್ಯದರ್ಶಿ ಪುಂಡಲೀಕ್ ರಾವ್ ಖಾಂಡ್ಕೆ ಮತ್ತು ಸಮಾಜದ ಬಂಧುಗಳು ಇದ್ದರು.