

ಪಾಂಡವಪುರ: 67ನೇ ಕನ್ನಡ ರಾಜ್ಯೋತ್ಸವ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ನ.25ರಿಂದ ಮೂರು ದಿನಗಳ ಕಾಲ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಪುನೀತೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ತಿಳಿಸಿದರು.
ನಟ ಶಿವರಾಜ್‌ಕುಮಾರ್ ಮಾರ್ಗದರ್ಶನ, ನಿರ್ದೇಶಕ ಹರ್ಷ ನೇತೃತ್ವದಲ್ಲಿ ನ.25, 26 ಹಾಗೂ 27ರಂದು ಹೆಸರಾಂತ ಸಿನಿಮಾ ನಟ, ನಟಿಯರು, ಸಂಗೀತ ನಿರ್ದೇಶಕರು ಹಾಗೂ ಖ್ಯಾತ ಹಿನ್ನೆಲೆ ಗಾಯಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಸಂಗೀತ ರಸಸಂಜೆ ಆಯೋಜಿಸಲಾಗಿದೆ. ಈ ಮೂಲಕ ಮೂರು ದಿನಗಳ ಕಾಲ ಪುನೀತ್ ಅವರಿಗೆ ಗೀತ ನಮನ ಸಲ್ಲಿಸಿ ಸ್ಮರಿಸಲಾಗುವುದು ಎಂದರು.
ನ.25 ರಂದು ಪಟ್ಟಣದ ಬಾಲಕಿಯರ ವಿದ್ಯಾಸಂಸ್ಥೆಯ ಸಾವಿರ ವಿದ್ಯಾರ್ಥಿಗಳಿಂದ ಸಾಮೂಹಿಕ ಗೀತ ಗಾಯನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕನಗನಮರಡಿ ಪ್ರೊ.ಕೃಷ್ಣೇಗೌಡ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅಭಿನಂದಿಸಲಿದ್ದಾರೆ. ಬಳಿಕ ಹಿನ್ನೆಲೆ ಗಾಯಕಿ ಅನನ್ಯಾ ಭಟ್ ಅವರಿಂದ ರಸಮಂಜರಿ ಆಯೋಜಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.26 ರಂದು ಪುನೀತ್ ರಾಜ್‌ಕುಮಾರ್ ಅವರ ಸಿನಿಮಾಗಳಲ್ಲಿ ನಟಿಸಿದ ಕಲಾವಿದರು ಹಾಗೂ ತಂತ್ರಜ್ಞರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಂದ ಸಂಗೀತ ಸಂಜೆ ಆಯೋಜಿಸಲಾಗಿದೆ. ಮೂರನೇ ದಿನವಾದ ನ.27 ರಂದು ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ರಾಜ್‌ಕುಮಾರ್ ಅವರ ಇಡೀ ಕುಟುಂಬ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಅಂದು ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಅವರಿಂದ ಸಂಗೀತೋತ್ಸವ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷೆ ವಿ.ಕೆ.ಅರ್ಚನಾ ಚಂದ್ರು, ಸದಸ್ಯರಾದ ಶಿವಕುಮಾರ್, ಚಂದ್ರು, ಬಿ.ವೈ.ಬಾಬು, ಸರಸ್ವತಿ, ಸುನೀತಾ, ಗೀತಾ ಅರ‌್ಮುಗಂ, ಇಮ್ರಾನ್ ಇತರರು ಇದ್ದರು.