ಪಾಂಡವಪುರದಲ್ಲಿ ರೈತ ಸಮಾವೇಶ ನಾಳೆ

24-pnp 1a indresh
ಡಾ.ಇಂದ್ರೇಶ್
Published on

ಪಾಂಡವಪುರ: ಪಟ್ಟಣದ ಟಿಎಪಿಸಿಎಂಎಸ್ ರೈತ ಸಭಾಂಗಣದಲ್ಲಿ ಮಾ.26 ರಂದು ಬಿಜೆಪಿ ರೈತ ಮೋರ್ಚಾ ವತಿಯಿಂದ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ರೈತ ಸಮಾವೇಶ ಆಯೋಜಿಸಲಾಗಿದೆ ಎಂದು ಬಿಜೆಪಿ ಮುಖಂಡ ಡಾ.ಇಂದ್ರೇಶ್ ತಿಳಿಸಿದರು.

ಸಮಾವೇಶಕ್ಕೆ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ, ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ರಾಜ್ಯ ಕಾರ್ಯದರ್ಶಿ ಸಿ.ಮಂಜುಳಾ, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ವಿಭಾಗ ಪ್ರಭಾರಿ ಮೈ.ವಿ.ರವಿಶಂಕರ್, ಶಿವಪ್ರಸಾದ್ ಸೇರಿದಂತೆ ಪಕ್ಷದ ಹಲವು ಮುಖಂಡರು ಪಾಲ್ಗೊಳ್ಳಲಿದ್ದಾರೆ. ಅಂದು ಬೆಳಗ್ಗೆ 10.30 ಕ್ಕೆ ಪಟ್ಟಣದ ಐದು ದೀಪ ವೃತ್ತದಿಂದ ಎತ್ತಿನಗಾಡಿ, ಟ್ರ್ಯಾಕ್ಟರ್ ಹಾಗೂ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಾವಯವ ಕೃಷಿಯಲ್ಲಿ ಸುಸ್ಥಿರತೆ ಸಾಧಿಸಿರುವ ಶಂಭೂನಹಳ್ಳಿ ಮಂಜು, ಚಿಕ್ಕಾಡೆ ಗಂಗಣ್ಣ, ಸುಂಕಾತೊಣ್ಣೂರು ದೇವೇಗೌಡ, ಶಿವಳ್ಳಿ ಬೋರೇಗೌಡ, ಬಿದರಹೊಸಹಳ್ಳಿ ಕೃಷ್ಣಪ್ಪ ಹಾಗೂ ಮಾರಗೌಡನಹಳ್ಳಿ ಕಾಂತರಾಜು ಅವರನ್ನು ಸನ್ಮಾನಿಸಲಾಗುವುದು ಎಂದರು.

ವಿರೋಧಿಗಳಿಂದ ಅಪಪ್ರಚಾರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಯದೆ ರೈತ ಸಂಘದ ಅಭ್ಯರ್ಥಿ ಬೆಂಬಲಿಸಲು ನಿರ್ಧಾರವಾಗಿದೆ ಎಂಬ ಅಪಪ್ರಚಾರದಲ್ಲಿ ವಿರೋಧಿಗಳು ತೊಡಗಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ಪಕ್ಷದ ರಾಷ್ಟ್ರ ಮತ್ತು ರಾಜ್ಯ ನಾಯಕರು ಈ ರೀತಿಯ ತೀರ್ಮಾನಗಳನ್ನು ಕೈಗೊಳ್ಳುವುದಿಲ್ಲ. ಇದು ಚುನಾವಣೆ ಸಂದರ್ಭವಾಗಿರುವ ಕಾರಣ ಇಂತಹ ವಿಚಾರಗಳಿಗೆ ರೆಕ್ಕೆಪುಕ್ಕ ಬೆಳೆದುಕೊಳ್ಳುತ್ತವೆ. ಪಕ್ಷದ ರಾಜ್ಯ ನಾಯಕರು ಸ್ಪಷ್ಟ ಭರವಸೆ ನೀಡಿದ್ದು, ಎಂತಹ ಸಂದರ್ಭ ಬಂದರೂ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಣಕ್ಕಿಳಿಯುವುದು ಖಚಿತ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಸಿ.ಎಸ್.ಪುಟ್ಟರಾಜು ಅವರು ಪುತ್ಥಳಿ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕ್ಷೇತ್ರದ ದುದ್ದ ಹೋಬಳಿಯ ಮಾಚಹಳ್ಳಿ ಗ್ರಾಮದ ಜನರ ಒತ್ತಾಸೆಯಂತೆ ಗ್ರಾಮದಲ್ಲಿ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಿಸಿಕೊಡಲಾಗಿದೆ. ಆ ಬಳಿಕ ಪುಟ್ಟರಾಜು ಅವರು ಅದೇ ಗ್ರಾಮದಲ್ಲಿ ಬಸವೇಶ್ವರರ ಪುತ್ಥಳಿ ನಿರ್ಮಿಸಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಜೋಗೀಗೌಡ, ಮಂಡಲ ಅಧ್ಯಕ್ಷ ಎಲ್.ಅಶೋಕ್, ಜಿಲ್ಲಾ ಕಾರ್ಯದರ್ಶಿ ಕಾಂತರಾಜು, ಕಣಿವೆ ಮಹೇಶ್, ಸಂದೇಶ್, ಕನ್ನಂಬಾಡಿ ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net