

ಪಾಂಡವಪುರ: ಉಜ್ಜಿರೆಯ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ, ಕೊಲೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ನೇಗಿಲಯೋಗಿ ಸಮಾಜ ಸೇವಾ ಸಂಘಟನೆಯ ಕಾರ್ಯಕರ್ತರು ಗುರುವಾರ ರಾತ್ರಿ ಮೌನ ಪ್ರತಿಭಟನೆ ನಡೆಸಿದರು.
ಪಟ್ಟಣದ ಐದು ದೀಪ ವೃತ್ತದ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ಮೇಣದಬತ್ತಿಗಳನ್ನು ಹಿಡಿದು ಡಾ.ರಾಜ್‌ಕುಮಾರ್ ವೃತ್ತದ ಮೂಲಕ ಹಳೇ ಬಸ್ ನಿಲ್ದಾಣದವರೆಗೆ ಮೌನ ಮೆರವಣಿಗೆ ನಡೆಸಿದರು. ಸಂಘಟನೆಯ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನೇಗೌಡ ಮಾತನಾಡಿ, ಸೌಜನ್ಯಾ ಹತ್ಯೆ ಪ್ರಕರಣ ಸಂಬಂಧ ಬುದ್ಧಿಮಾಂದ್ಯ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಆತನನ್ನು ನಿರ್ದೋಷಿ ಎಂದು ನ್ಯಾಯಾಲಯ ಬಿಡುಗಡೆ ಮಾಡಿದೆ. ಆತ ಅಪರಾಧಿ ಅಲ್ಲ ಎಂದಾದ ಮೇಲೆ ಯಾರಾದರೊಬ್ಬರು ಕೃತ್ಯ ಎಸಗಿರಲೇಬೇಕು. ಆತ ಯಾರು ಎಂಬುದನ್ನು ಪತ್ತೆ ಹಚ್ಚಿ ಆತನಿಗೆ ಉಗ್ರ ಶಿಕ್ಷೆ ನೀಡುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕಾದ ಕರ್ತವ್ಯ ಸರ್ಕಾರದ ಜವಾಬ್ದಾರಿ. ಹೀಗಾಗಿ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಟ್ರಸ್ಟ್‌ನ ಕಾರ್ಯದರ್ಶಿ ಕೋ.ಪು.ಗುಣಶೇಖರ್ ಮಾತನಾಡಿ, ಸೌಜನ್ಯಾ ಅತ್ಯಾಚಾರ ಪ್ರಕಣದಲ್ಲಿ ಅಮಾಯಕ ವ್ಯಕ್ತಿಯನ್ನು ಬಂಧಿಸಿ ಆತನನ್ನು 6 ವರ್ಷಗಳ ಕಾಲ ಸೆರೆವಾಸದಲ್ಲಿ ಇಟ್ಟಿದ್ದು ಸರಿಯಲ್ಲ. ಈ ಪ್ರಕರಣದಲ್ಲಿ ಸೌಜನ್ಯಾ ಕುಟುಂಬದವರಿಗೆ ಅನ್ಯಾಯವಾಗಿದೆ. ಇಡೀ ಕುಟುಂಬ ಕೊರಗುತ್ತಾ ಜೀವಂತ ಶವವಾಗಿ ಬದುಕುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಕಾಮುಕರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡಬೇಕು. ಈ ವಿಚಾರದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮೇಣದ ಬತ್ತಿ ಮೆರವಣಿಗೆ ನಡೆಸಲಾಗುತ್ತಿದೆ. ಹತ್ಯೆ ಪ್ರಕರಣ ಮರುತನಿಖೆ ಆಗಲೇಬೇಕು ಎಂಬುದು ಇಡೀ ರಾಜ್ಯದ ಜನತೆಯ ಒಕ್ಕೊರಲಿನ ಆಗ್ರಹವಾಗಿದೆ. ಹೀಗಾಗಿ ಸರ್ಕಾರ ಪ್ರಕರಣದ ಮರುತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಪುರಸಭೆ ಸದಸ್ಯ ಉಮಾಶಂಕರ್, ಕಾಂಗ್ರೆಸ್ ಮುಖಂಡರಾದ ಕುಬೇರ್, ಸಿ.ಎಂ.ಮಹೇಶ್, ರೈತ ಸಂಘದ ಮುಖಂಡರಾದ ಸ್ವಾಮಿಗೌಡ, ಹೋಟೆಲ್ ಜಯರಾಮು, ಸಾಹಿತಿ ಚಂದ್ರಶೇಖರಯ್ಯ, ನಾರಾಯಣಗೌಡ, ಕೃಷ್ಣೇಗೌಡ ಇತರರು ಇದ್ದರು.