

ಪಾಂಡವಪುರ: ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಅವರ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಿರುವ ಮೂರು ದಿನಗಳ ಪುನೀತೋತ್ಸವ ಕಾರ್ಯಕ್ರಮಕ್ಕೆ ಶುಕ್ರವಾರ ರಾತ್ರಿ ನಟ ನಿಖಿಲ್‌ಕುಮಾರಸ್ವಾಮಿ ಚಾಲನೆ ನೀಡಿದರು.
ಕ್ರೀಡಾಂಗಣದಲ್ಲಿ ನಿರ್ಮಿಸಿದ್ದ ಅದ್ದೂರಿ ವೇದಿಕೆಯಲ್ಲಿ ನಟರಾದ ಅಂಬರೀಶ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಬಳಿಕ ಪಟ್ಟಣ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಿಕ್ಕೇರಿ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ನಾಡಗೀತೆ, ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಪುನೀತ್ ರಾಜ್‌ಕುಮಾರ್ ಅಭಿನಯದ ಬೊಂಬೆ ಹೇಳುತೈತೆ ಹಾಡುಗಳನ್ನು ಸಾಮೂಹಿಕವಾಗಿ ಹಾಡುವ ಮೂಲಕ ಗೀತ ನಮನ ಸಲ್ಲಿಸಿದರು.
ಚಲನಚಿತ್ರ ನಟ-ನಟಿಯರು ನೃತ್ಯ ಪ್ರದರ್ಶನ ನೀಡಿದರೆ, ಮಜಾಭಾರತ ಕಲಾವಿದರಾದ ಸಂತೋಷ್(ತುಕಾಲಿ ಸಂತು) ತಂಡದಿಂದ ಹಾಸ್ಯೋತ್ಸವ ಹಾಗೂ ಗಾಯಕಿ ಅನನ್ಯಾಭಟ್ ನಡೆಸಿಕೊಟ್ಟ ಸಂಗೀತ ರಸಸಂಜೆ ಕಾರ್ಯಕ್ರಮ ಅಲ್ಲಿ ನೆರೆದಿದ್ದ ಸಾವಿರಾರು ಪ್ರೇಕ್ಷಕರ ಮನಸೊರೆಗೊಂಡಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಕಾರ್ಯಕ್ರಮದುದ್ದಕ್ಕೂ ನಟರಾದ ಪುನೀತ್ ರಾಜ್‌ಕುಮಾರ್, ಅಂಬರೀಶ್ ಹಾಗೂ ದರ್ಶನ್ ಅವರಿಗೆ ಜೈಕಾರದ ಘೋಷಣೆಗಳು ಮೊಳಗಿದವು. ವಾಗ್ಮಿ ಹಾಗೂ ಸಾಹಿತಿ ಕನಗನಮರಡಿ ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು.