ಪಾಂಡವಪುರದಲ್ಲಿ ನ.23 ರಂದು ಲಕ್ಷ ದೀಪೋತ್ಸವ

Deepavali
Published on

ಸಿದ್ದಗಂಗಾ ಶ್ರೀ ಗುರುವಂದನೆ

ಪಾಂಡವಪುರ : ಕಾರ್ತಿಕ ಮಾಸದ ಹಿನ್ನೆಲೆಯಲ್ಲಿ ಬಾಲಶನೈಶ್ಚರ ಭಕ್ತಮಂಡಳಿ ವತಿಯಿಂದ ನ.23 ರಂದು ಪಟ್ಟಣದ ಕೃಷ್ಣನಗರದಲ್ಲಿ ಲಕ್ಷ ದೀಪೋತ್ಸವ, ಕನ್ನಡ ರಾಜ್ಯೋತ್ಸವ, ಕಾವ್ಯ ಸಂಗಮ ಕವಿಗೋಷ್ಠಿ, ಚಲನಚಿತ್ರ ನಟ-ನಟಿಯರಿಂದ ರಸಸಂಜೆ ಹಾಗೂ ತುಮಕೂರು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪುರಸಭೆ ಸದಸ್ಯ ಎ.ಕೃಷ್ಣ ಅಣ್ಣಯ್ಯಪ್ಪ ತಿಳಿಸಿದರು. ಅಂದು ಸಂಜೆ 6ಕ್ಕೆ ಆಯೋಜನೆಗೊಂಡಿರುವ ಧಾರ್ಮಿಕ ಸಭೆಯಲ್ಲಿ ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಶ್ರೀ ಶಿವಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಾಲ ಶನೈಶ್ಚರ ದೇವಸ್ಥಾನದ ಧರ್ಮದರ್ಶಿ ರವಿತೇಜು ನೇತೃತ್ವದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ರಂಜಿಸಲಿವೆ. ಕಾರ್ಯಕ್ರಮಕ್ಕೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ ನೀಡಲಿದ್ದು, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ.ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜು ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕೆಪಿಸಿಸಿ ಸದಸ್ಯ ಬಿ.ರೇವಣ್ಣ, ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯೆ ಭಾಗ್ಯಾ, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಅವರು ವಿವರಿಸಿದರು.

ಕಾವ್ಯ ಸಂಗಮ: ನ.23ರ ಮಧ್ಯಾಹ್ನ 2ಗಂಟೆಗೆ ಕಾವ್ಯ ಸಂಗಮ -ಕವಿಗೋಷ್ಠಿ ನಡೆಯಲಿದೆ. ಜಿಲ್ಲಾ ಯುವ ಬರಹಗಾರ ಬಳಗದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಗೋಷ್ಠಿ ಉದ್ಘಾಟನೆ ಮಾಡಲಿದ್ದಾರೆ. ಸಹಾಯಕ ಕನ್ನಡ ಪ್ರಾಧ್ಯಾಪಕ ಹಳ್ಳಿ ವೆಂಕಟೇಶ್ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ದ್ಯಾವಪ್ಪ ಅವರ ‘ಕ್ರೂರಕಣ್ಣು’ ಕೃತಿ ಬಿಡುಗಡೆ ಮಾಡಲಾಗುವುದು ಎಂದು ಎ.ಕೃಷ್ಣ ಅಣ್ಣಯ್ಯಪ್ಪ ತಿಳಿಸಿದರು. ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ.ಎಸ್.ಮಂಜುನಾಥ್, ಕನಕ ಯುವ ಬಳಗದ ತಾಲೂಕು ಅಧ್ಯಕ್ಷ ಕೆ.ಸ್ವಾಮಿಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net