ಪಾಂಡವಪುರಕ್ಕೆ 3 ಅಂಗನವಾಡಿ ಕೇಂದ್ರ ಮಂಜೂರು

8-pnp 1
Published on

ಪಾಂಡವಪುರ: ಜನಸಂಖ್ಯಾ ಆಧಾರದ ಮೇಲೆ ತಾಲೂಕಿಗೆ ಮೂರು ಹೊಸ ಅಂಗನವಾಡಿ ಕೇಂದ್ರಗಳು ಮಂಜೂರಾಗಿವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೂರ್ಣಿಮಾ ಮಾಹಿತಿ ನೀಡಿದರು.


ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ಹಾಗೂ ಕೃಷಿ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಪಟ್ಟಣದ 9ನೇ ವಾರ್ಡ್, ಸುಂಕಾತೊಣ್ಣೂರು ಮತ್ತು ಪಟ್ಟಸೋಮನಹಳ್ಳಿಗೆ ಹೊಸದಾಗಿ ಅಂಗನವಾಡಿ ಕೇಂದ್ರ ಮಂಜೂರಾಗಿದ್ದು, ಶೀಘ್ರ ಆರಂಭಿಸಲಾಗುವುದು. ನವೆಂಬರ್ ಅಂತ್ಯದವರೆಗೆ ನೌಕರರು ಮತ್ತು ಅಂಗನವಾಡಿ ಸಿಬ್ಬಂದಿಗೆ ನೀಡಬೇಕಾದ ವೇತನ, ಗೌರವಧನ ಪಾವತಿಸಲಾಗಿದೆ. ಜತೆಗೆ ಡಿ ಗ್ರೂಪ್ ನೌಕರರ ನೇಮಕಾತಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು.


ಉದ್ಯೋಗಿನಿ ಯೋಜನೆಯಡಿ 3 ಲಕ್ಷ ರೂ.ವರೆಗೆ ಇಲಾಖೆಯಿಂದ ಸಾಲ ಸೌಲಭ್ಯಕ್ಕೆ ಅರ್ಜಿ ಅಹ್ವಾನಿಸಲಾಗಿದ್ದು, ಡಿ.22 ಕೊನೆಯ ದಿನವಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು ಎಂದರು.


ಕೃಷಿ ಇಲಾಖೆ ಜಗದೀಶ್ ಮಾತನಾಡಿ, ಬರ ಪರಿಹಾರ ಪಡೆಯಲು ರೈತರು ಅಗತ್ಯ ದಾಖಲೆಗಳನ್ನು ದಾಖಲಿಸಿಕೊಳ್ಳಬೇಕು. ಇಲಾಖೆಯ ಸೆಕೆಂಡರಿ ಅಗ್ರಿಕಲ್ಚರ್ ಯೋಜನೆಯಡಿ ಕೃಷಿ ಸಂಸ್ಕರಣೆ, ಜೇನು ಸಾಕಾಣಿಕೆ ಹಾಗೂ ಅಣಬೆ ಕೃಷಿ ಮಾಡುವ ರೈತರಿಗೆ 3 ಲಕ್ಷದವರೆಗೆ ಸಹಾಯಧನ ನೀಡಲಾಗಿತ್ತಿದೆ. ಈ ಯೋಜನೆಗಳ ಬಗ್ಗೆ ರೈತರು ಅರಿವು ಮೂಡಿಸಿಕೊಳ್ಳಬೇಕು. ಹನಿ ನೀರಾವರಿ ಯೋಜನೆಯಡಿ ರೈತರಿಗೆ ಪೈಪ್‌ಗಳನ್ನು ವಿತರಿಸಲಾಗುತ್ತಿದ್ದು, ಸಬ್ಸಿಡಿ ದರದಲ್ಲಿ ರಾಗಿ ಬಿತ್ತನೆ ಬೀಜ ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.


ತಾಪಂ ಆಡಳಿತಾಧಿಕಾರಿ ವಿ.ಎಸ್.ಅಶೋಕ್ ಮಾತನಾಡಿ, ಮುಂದಿನ ವರ್ಷದ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಲೋಕಸಭೆ ಚುನಾವಣೆ ಎದುರಾಗುವ ಸಾಧ್ಯತೆ ಇದೆ. ಜಿಪಂ, ತಾಪಂ ಎಲ್ಲ ಕಾರ್ಯಕ್ರಮಗಳನ್ನು ಚುನಾವಣೆಗೂ ಮುನ್ನ ಪೂರ್ಣಗೊಳಿಸಬೇಕಿದೆ. ಚುನಾವಣೆ ನೀತಿ ಸಂಹಿತೆ ಎದುರಾದರೆ ಕಾರ್ಯಕ್ರಮಗಳು ರದ್ದಾಗಬಹುದು. ಹೀಗಾಗಿ ಇಲಾಖೆಯ ಕೆಲಸ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.


ರೈತರು ಚೋಳು ಭೂಮಿಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮೀನು ಸಾಕಣೆ ಮಾಡಿ ಅಧಿಕ ಲಾಭ ಗಳಿಸಬಹುದು. ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ರೈತರಿಗೆ ಅರಿವು ಮೂಡಿಸಬೇಕು. ತಾಲೂಕಿನ ಬಹುತೇಕ ಕೆರೆ ಕಟ್ಟೆಗಳಲ್ಲಿ ವರ್ಷವಿಡೀ ನೀರು ಸಂಗ್ರಹವಿರುತ್ತದೆ. ಅಂತಹ ಕೆರೆಗಳಲ್ಲಿ ಮೀನು ಸಾಕಣೆ ಮಾಡಬೇಕು. ಪ್ರವಾಸೋದ್ಯಮ ಇಲಾಖೆಯೊಂದಿಗೆ ಕೈಜೋಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಸ್ಥಳಗಳಲ್ಲಿ ತಾಜಾ ಮೀನಿನ ಮಾರಾಟಕ್ಕೆ ಮುಂದಾಗಬಹುದು ಎಂದು ಸಲಹೆ ನೀಡಿದರು.


ತಾಪಂ ಇಒ ಲೋಕೇಶ್ ಮೂರ್ತಿ, ಬಿಇಒ ಬಿ.ಚಂದ್ರಶೇಖರ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಮಹದೇವಸ್ವಾಮಿ, ಜಿಪಂ ಎಇ ರೇವಣ್ಣ, ಬಿಸಿಎಂ ಇಲಾಖೆಯ ಸತೀಶ್, ತೋಟಗಾರಿಕೆ ಇಲಾಖೆ ಸಹಾಯ ನಿರ್ದೇಶಕಿ ಸೌಮ್ಯಾ, ನರೇಗಾ ಸಹಾಯಕ ನಿರ್ದೇಶಕ ಸುರೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net