ಪಾಂಡವಪುರ ಪಟ್ಟಣದ ಸಮಸ್ಯೆಗಳ ನಿವಾರಣೆಗೆ ಆಗ್ರಹ

23-pnp 1
ಪಾಂಡವಪುರ ಪಟ್ಟಣದ ನಾಗರಿಕರಿಗೆ ತಲೆನೋವಾಗಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಬಿಜೆಪಿ ಮುಖಂಡರು ಪುರಸಭೆ ಮುಖ್ಯಾಧಿಕಾರಿಯನ್ನು ಒತ್ತಾಯಿಸಿದರು.
Published on

ಪಾಂಡವಪುರ: ಪುರಸಭೆಯಲ್ಲಿನ ಭ್ರಷ್ಟಾಚಾರ, ರಸ್ತೆ ಡಾಂಬರೀಕರಣ, ಅನೈರ್ಮಲ್ಯ, ವಿಶ್ವೇಶ್ವರಯ್ಯ ನಾಲೆಗೆ ಕೊಳಚೆ ನೀರಿನ ಹರಿವು, ಬೀದಿದೀಪ ನಿರ್ವಹಣೆ ಸೇರಿದಂತೆ ಪಟ್ಟಣದ ನಾಗರಿಕರನ್ನು ಕಾಡುತ್ತಿರುವ ಸಮಸ್ಯೆಗಳನ್ನು ನಿವಾರಿಸುವಂತೆ ಮಂಗಳವಾರ ಬಿಜೆಪಿ ಮುಖಂಡರು ಪುರಸಭೆ ಮುಖ್ಯಾಧಿಕಾರಿ ವೀಣಾ ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಮುಖಂಡ ಹಾಗೂ ಕಿಯಾನಿಕ್ಸ್ ನಿರ್ದೇಶಕ ಎಚ್.ಎನ್.ಮಂಜುನಾಥ್ ಮಾತನಾಡಿ, ಪಟ್ಟಣದ ಹಳೇನಾಗಮಂಗಲ ರಸ್ತೆಯಲ್ಲಿ ಹೊಸದಾಗಿ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆಯಾದರೂ, ಒಂದು ದಿನವೂ ವಿದ್ಯುತ್ ದೀಪಗಳು ಉರಿಯುತ್ತಿಲ್ಲ. ಹಳೇ ಬಸ್ ನಿಲ್ದಾಣದಲ್ಲಿ ಹೂವಿನ ವ್ಯಾಪಾರಸ್ಥರ ಅನುಕೂಲಕ್ಕಾಗಿ ನವೀಕರಿಸಿರುವ ಅಂಗಡಿಗಳನ್ನು ಖಾಲಿ ಬಿಡಲಾಗಿದೆ. ಉಪವಿಭಾಗೀಯ ಆಸ್ಪತ್ರೆ ಪಕ್ಕದಲ್ಲಿರುವ ಸಾರ್ವಜನಿಕ ಶೌಚಗೃಹ ಗಬ್ಬುನಾರುತ್ತಿದ್ದು, ರೋಗಿಗಳ ಮೇಲೂ ಪರಿಣಾಮ ಬೀರುತ್ತಿದೆ. ಅನಂತರಾಮು ವೃತ್ತದ ರಸ್ತೆ ಅಭಿವೃದ್ಧಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ಪ್ರಮುಖ ರಸ್ತೆಗಳು ಹದಗೆಟ್ಟಿವೆ. ವಿಶ್ವೇಶ್ವರಯ್ಯ ನಾಲೆಗೆ ಚರಂಡಿ ನೀರನ್ನು ಹರಿಯಬಿಡಲಾಗಿದೆ ಎಂದು ಆರೋಪಿಸಿದರು.

ಕಂದಾಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿರುವ ಮಹದೇವಸ್ವಾಮಿ ಅವರು ಮನೆ, ನಿವೇಶನ ಮಾರಾಟ ಮಾಡುವ ವ್ಯಕ್ತಿಗಳು 10 ವರ್ಷ ಕಂದಾಯ ಪಾವತಿಸಬೇಕಿದ್ದರೂ, ಕೇವಲ ಒಂದು ವರ್ಷದ ಕಂದಾಯ ಪಾವತಿಸಿಕೊಂಡು ದಾಖಲೆ ಮಾಡಿಕೊಟ್ಟಿದ್ದಾರೆ. ಈಗ ನಿವೇಶನ ಖರೀದಿದಾರರಿಂದ ಹಳೇ ಕಂದಾಯ ಪಾವತಿಗೆ ಒತ್ತಾಯಿಸಲಾಗುತ್ತಿದೆ. ಭ್ರಷ್ಟಾಚಾರ ಎಸಗಿರುವ ಅಧಿಕಾರಿ ವಿರುದ್ಧ ಜಿಲ್ಲಾಧಿಕಾರಿಗೆ ಪತ್ರ ಬರೆದು ಕ್ರಮ ಕೈಗೊಂಡು ಅವರಿಂದಲೇ ಹಳೇ ಕಂದಾಯದ ಬಾಕಿ ಹಣ ವಸೂಲಿ ಮಾಡಬೇಕೆಂದು ಆಗ್ರಹಿಸಿದರು.

ಪಟ್ಟಣದ ಒಳಚರಂಡಿ ವ್ಯವಸ್ಥೆಗೆ ಜಮೀನು ನೀಡಿರುವ ರೈತರಿಗೆ 16 ವರ್ಷ ಕಳೆದರೂ ಸೂಕ್ತ ಪರಿಹಾರ ಒದಗಿಸಿಲ್ಲ. ಈ ಬಗ್ಗೆ ರೈತರು ನ್ಯಾಯಾಲಯದಲ್ಲಿ ದಾವೆ ಹೂಡಿದ ಪರಿಣಾಮ ಚದರ ಅಡಿಗೆ 375 ನೀಡುವಂತೆ ನ್ಯಾಯಾಲಯ ಕೂಡ ಆದೇಶ ನೀಡಿದೆ. ಹೀಗಾಗಿ ರೈತರಿಗೆ ಪರಿಹಾರ ನೀಡಿ ಒಳಚರಂಡಿ ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿ ಪೂರೈಸಿ ಪಟ್ಟಣದಲ್ಲಿ ನಾಗರಿಕರಿಗೆ ತಲೆನೋವಾಗಿರುವ ಯುಜಿಡಿ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.

ಪುರಸಭೆ ಸದಸ್ಯ ಶ್ರೀನಿವಾಸ್ ನಾಯಕ, ಹೌಸಿಂಗ್ ಬೋರ್ಡ್ ನಿರ್ದೇಶಕ ಎನ್.ಭಾಸ್ಕರ್, ಮುಖಂಡರಾದ ಆರ್.ಚೆನ್ನಕೇಶವ, ಸೋಮಾಚಾರಿ, ಹಿರೋಡೆ ಬೀದಿ ಚಂದ್ರಶೇಖರ್, ಹರಳಕುಪ್ಪೆ ಪರಶಿವಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net