ಅಪಾರ ಬೆಳೆ ಹಾನಿ, ರೈತರಿಗೆ ನಷ್ಟ

26-pnp 1
Published on

ಪಾಂಡವಪುರ: ತಾಲೂಕಿನಾದ್ಯಂತ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆ ಹಾಗೂ ಗಾಳಿಗೆ ಅಪಾರ ಬೆಳೆ ನಾಶವಾಗಿದ್ದು, ಮನೆಗಳ ಛಾವಣಿ ಹಾರಿಹೋಗಿವೆ. ಕಾರಿನ ಮೇಲೆ ಮರ ಬಿದ್ದು ನಷ್ಟವಾಗಿದೆ.


ರಾತ್ರಿ 8 ಗಂಟೆ ಸುಮಾರಿಗೆ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಸುರಿದ ವರ್ಷಧಾರೆಗೆ ಶಂಭೂವಿನಹಳ್ಳಿ, ಆಗನಹಳ್ಳಿ, ಅಲ್ಪಹಳ್ಳಿ, ಮೊರಸನಹಳ್ಳಿ, ಹರವು, ಹೊಸಕನ್ನಂಬಾಡಿ, ಹಾರೋಹಳ್ಳಿ ಇತರೆಡೆ ಬಾಳೆ, ಟೊಮ್ಯಾಟೊ, ಬೀನ್ಸ್ ಮತ್ತಿತರ ಬೆಳೆಗಳು ನಾಶವಾಗಿವೆ.


ಆಗನಹಳ್ಳಿಯ ಶಿವಕುಮಾರ್ ಎಂಬುವರು 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಹಾಗೂ ಕಾಯಿ ಕಚ್ಚಿದ್ದ ಟೊಮ್ಯಾಟೊ ಗಿಡಗಳು ನೆಲ ಕಚ್ಚಿವೆ. ಶಂಭೂವಿನಹಳ್ಳಿಯಲ್ಲಿ ಮನೆಯ ಛಾವಣಿ ಹಾರಿಹೋಗಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಗೊಬ್ಬಳಿ ಮರ ಬಿದ್ದು ಜಖಂಗೊಂಡಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ.


ಆಲಿಕಲ್ಲು ಮಳೆ: ಹಲವು ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಬಿದ್ದಿದ್ದು, ಅದರ ರಭಸಕ್ಕೆ ತರಕಾರಿ, ಹೂವು ಬೆಳೆಗಳು ನಾಶವಾಗಿವೆ. ಕಾಯಿ ಕಚ್ಚಿದ್ದ ಗಿಡಗಳ ಮೇಲೆ ಆಲಿಕಲ್ಲು ಬಿದ್ದ ಪರಿಣಾಮ ಕಾಯಿಗಳು ಉದುರಿ ಹೋಗಿ ರೈತರಿಗೆ ಅಪಾರ ನಷ್ಟ ಉಂಟಾಗಿದೆ.


ಅಧಿಕಾರಿಗಳ ಭೇಟಿ: ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್, ಕಂದಾಯ ಅಧಿಕಾರಿಗಳು ಭೇಟಿ ನೀಡಿ ನಷ್ಟದ ಪ್ರಮಾಣ ಅಂದಾಜಿಸಿದ್ದಾರೆ. ರೈತರ ಜಮೀನು ಮತ್ತು ತೋಟಗಳಿಗೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಪಿ.ಸೌಮ್ಯಾ ಮತ್ತವರ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net