

ಹಾಸನ: ನಗರದಲ್ಲಿ ಪ್ರತಿಷ್ಠಾಪಿಸಿದ್ದ ಪಾಂಚಜನ್ಯಗಣಪತಿ ಉತ್ಸವ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಸಮಿತಿ ವತಿಯಿಂದ ಧನ್ಯವಾದ ತಿಳಿಸುವುದಾಗಿ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ವೇಣುಗೋಪಾಲ್ ಅವರು ಹೇಳಿದರು.
ಸೆ.7 ರಂದು ಪರಸರಕ್ಕೆ ಪೂರಕವಾದ ಕೇವಲ ಜೇಡಿಮಣ್ಣಿನಿಂದ ತಯಾರಿಸಿದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಗಣೇಶೋತ್ಸವ 6 ದಿನಗಳ ಕಾಲ ಭರತನಾಟ್ಯ, ಯುದ್ಧ ಕಲೆ ಕಳರಿ ಪಯಟ್ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಸ್ಥಳೀಯ ಕಲಾವಿದವರಿಗೆ ಅವಕಾಶ ನೀಡಲಾಗಿತ್ತು. ಅಲ್ಲದೆ ಮಣ್ಣಿನಿಂದ ಮಕ್ಕಳು ಗಣಪತಿ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಅಂತಿಮ ದಿನ ಗಣಪತಿ ವಿಸರ್ಜನೆ ಅಂಗವಾಗಿ ಹಮ್ಮಿಕೊಂಡಿದ್ದ ಶೋಭಾಯಾತ್ರೆಯಲ್ಲಿ ಅಪಾರ ಭಕ್ತರು ಭಾಗಿಯಾಗಿದ್ದರು. ನಾಸಿಕ್‌ಡೋಲು, ಹನುಮವೇಷಧಾರಿಗಳು ಗಮನ ಸೆಳೆದರು. ಡಿಜೆ ತಾಳಕ್ಕೆ ವಿವಿಧ ಸಾಂಸ್ಕೃತಿಕ ತಂಡಗಳು ಭಾಗಿಯಾಗಿದ್ದವು. ಪ್ರತಿಯೊಬ್ಬರೂ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಇದಕ್ಕೆ ಸಹಕಾರ ನೀಡಿದ ನಗರಸಭೆ, ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಧನ್ಯವಾದ ಹೇಳಿದರು.
ಸಮಿತಿ ಕಾರ್ಯಾಧ್ಯಕ್ಷ ದಯಾನಂದ ಮಾತನಾಡಿ, ಪಾಂಚಜನ್ಯ ಗಣೇಶೋತ್ಸವದಲ್ಲಿ ಪಕ್ಷಾತೀತವಾಗಿ ಎಲ್ಲರೂ ಭಾಗಿಯಾಗಿದ್ದರು. ಹೀಗಾಗಿ ಇದು ಕೇವಲ ಆರ್‌ಎಸ್‌ಎಸ್ ಅಲ್ಲದೆ ಎಲ್ಲಾ ಪಕ್ಷದ ಉತ್ಸವ ಆಗಿದೆ. ಗಣಪತಿ ವಿಸರ್ಜನಾ ಮೆರವಣಿಗೆಗೆ ಪೌರಕಾರ್ಮಿಕ ಮಹಿಳೆ ಅನುರಾಧಮ್ಮ ಅವರಿಂದ ಚಾಲನೆ ನೀಡಿಸಲಾಯಿತು. ಒಟ್ಟಾರೆ ಎಲ್ಲಾ ಇಲಾಖೆಗಳ ಸಹಕಾರದಿಂದ ಈ ಬಾರಿಯ ಉತ್ಸವ ಯಶಸ್ವಿಯಾಗಿದೆ. ಮುಂದೆಯೂ ಇದೇ ರೀತಿ ಸಹಕಾರ ನೀಡುವಂತೆ ಮನವಿ ಮಾಡಿದರು.
ಸಮಿತಿಯ ಅಧ್ಯಕ್ಷ ವಾಸು, ಸಹ ಕಾರ್ಯದರ್ಶಿ ರವಿ ಸೋಮು, ಖಜಾಂಚಿ ಲಾವಣ್ಯ, ನಿರ್ದೇಶಕ ಶರತ್ ಇದ್ದರು.