ಪಹಣಿ ಲೋಪ ಸರಿಪಡಿಸಿ : ಮಾಸಾಂತ್ಯ ಗಡುವು ನೀಡಿದ ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ​

01
Published on

ಕುಣಿಗಲ್​: ಪಹಣಿಯಲ್ಲಿನ ಲೋಪದೋಷಗಳನ್ನು ಜು.30ರೊಳಗೆ ಸರಿಪಡಿಸುವಂತೆ ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ​ ಅಧಿಕಾರಿಗಳಿಗೆ ಖಡಕ್​ ಸೂಚನೆ ನೀಡಿದರು.

ತಾಲೂಕು ಕಚೇರಿ ನ್ಯಾಯಾಲಯ ಅವರಣದಲ್ಲಿ ಮಂಗಳವಾರ ಕಂದಾಯ ಇಲಾಖೆ ಹಾಗೂ ಸರ್ವೇ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ರೈತರು ಸರ್ಕಾರ ಹಾಗೂ ಬ್ಯಾಂಕ್​ಗಳಿಂದ ಸೌಲಭ್ಯ ಪಡೆಯಲು ಆಸ್ತಿಯ ದಾಖಲೆ ಅಗತ್ಯವಾಗಿರುತ್ತದೆ. ಆದರೆ ಪೂರ್ವಿಕರು ತಮ್ಮಆಸ್ತಿಗೆ ಸಂಬಂಧಿಸಿದ ದಾಖಲೆ ಮಾಡಿಸಿಕೊಳ್ಳದ ಕಾರಣ ಅವರ ಮಕ್ಕಳು ಹಾಗೂ ಸಂಬಂಧಿಕರು ದಾಖಲೆಗಾಗಿ ಈಗ ಪರದಾಡುವಂತಾಗಿದೆ. ಹಾಗಾಗಿ ಪಹಣಿಯ ಕಾಲಂ ಮೂರು ಹಾಗೂ ಕಾಲಂ ಒಂಭತ್ತರಲ್ಲಿನ ವ್ಯತ್ಯಾಸಗಳನ್ನು ಜು.30ರೊಳಗೆ ಸರಿಪಡಿಸಿಸುವಂತೆ ತಹಸೀಲ್ದಾರ್​ ಮಹಬಲೇಶ್ವರ ಅವರಿಗೆ ಸೂಚಿಸಿದರು.

ಸರ್ವೇ ಎಡಿಎಲ್​ಆರ್​ಗೆ ತರಾಟೆ: ಸರ್ವೇಗಾಗಿ ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ ಸರ್ವೇ ಅಧಿಕಾರಿಗಳು ಕ್ರಮಕೈಗೊಳ್ಳದೆ ರೈತರನ್ನು ವಿನಾಕಾರಣ ಅಲೆಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದರು. ಇದರಿಂದ ಕೆಂಡಾಮಂಡಲರಾದ ಜಿಲ್ಲಾಧಿಕಾರಿ ವೈ.ಎಸ್​.ಪಾಟೀಲ​, ಸರ್ವೇ ಇಲಾಖೆಯಲ್ಲಿ ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಇದನ್ನು ಸರಿಪಿಡಿಸಿ ಜನರಿಗೆ ಕೆಲಸ ಮಾಡಿಕೊಡಬೇಕು, ಇಲ್ಲವಾದಲ್ಲಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಸರ್ವೇ ಇಲಾಖೆ ಎಡಿಎಲ್​ಆರ್​ ಮಂಜುನಾಥ್​ಬಾಬು, ತಾಲೂಕು ಸರ್ವೇಯರ್​ ನರಸೇಗೌಡ ಅವರನ್ನು ತರಾಟೆ ತೆಗೆದುಕೊಂಡರು.

12 ಸಾವಿರ ಅರ್ಜಿ ಬಾಕಿ: ಬಗರ್​ ಹುಕ್ಕಂಗೆ ಸಂಬಂಧಿಸಿದಂತೆ 12ಸಾವಿರ ಅರ್ಜಿಗಳು ವಿಲೇ ಆಗದೆ ಬಾಕಿ ಇದೆ, ನಾಲ್ಕು ಸಾವಿರ ಜಮೀನಿನ ಪೋಡಿ ಬಾಕಿ ಇದೆ. ತಹಸೀಲ್ದಾರ್​ ನೇತೃತ್ವದಲ್ಲಿ ರಾಜಸ್ವ ನಿರೀಕ್ಷರು, ಗ್ರಾಮಲೆಕ್ಕಿಗರು ತಂಡ ಮಾಡಿಕೊಂಡು ಇತ್ಯರ್ಥಪಡಿಸಿ ಅರ್ಹ ರೈತರಿಗೆ ಉಳಿಮೆ ಚೀಟಿ ಕೊಡುವಂತೆ ಜಿಲ್ಲಾಧಿಕಾರಿಗೆ ಶಾಸಕರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ವೈ.ಎಸ್​.ಪಾಟೀಲ ಈ ಸಂಬಂಧ ಸೂಚನೆ ನೀಡಲಾಗಿದೆ ಅದಷ್ಟು ಬೇಗ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಂದಾಯ ಇಲಾಖೆ ಗೊಂದಲದ ಗೂಡು: ಜಮೀನು ಹಾಗೂ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಕಂದಾಯ ಇಲಾಖೆಯಿಂದ ರೈತರು ಮಾಡಿಸಿಕೊಳ್ಳಬೇಕಾಗಿದೆ. ಆದರೆ ಕೆಲ ಕಾರಣವೋಡ್ಡಿ ಅಧಿಕಾರಿಗಳು ರೈತರಿಗೆ ಸಕಾಲದಲ್ಲಿ ಆಸ್ತಿಗೆ ಸಂಬಂಧಿಸಿದ ದಾಖಲೆ ಮಾಡಿಕೊಡುತ್ತಿಲ್ಲ ಎಂದು ವ್ಯಾಪಕವಾಗಿ ದೂರು ಕೇಳಿ ಬರುತ್ತಿದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಶಾಸಕ ಡಾ.ಎಚ್​.ಡಿ.ರಂಗನಾಥ್​, ಕಂದಾಯ ಇಲಾಖೆ ಸಮಸ್ಯೆಯ ಗೊಂದಲ ಗೂಡಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಸರ್ವೇ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವುದಿಲ್ಲ ಇದರಿಂದ ರೈತರು ಸೇರಿದಂತೆ ಸಾಮಾನ್ಯ ಜನರು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಇದನ್ನು ಸರಿಪಡಿಸಿಕೊಳ್ಳಬೇಕು, ಕೇಂದ್ರ ಸ್ಥಾನದಲ್ಲಿದ್ದು ಜನರ ಸಮಸ್ಯೆಗೆ ಸ್ಪಂಧಿಸಿ ಕೆಲಸ ಮಾಡುವಂತೆ ಸೂಚಿಸಿದರು.

ಇ&ರೂಂ ಸ್ಥಾಪಿಸಿ: ಗ್ರಾಮೀಣ ಪ್ರದೇಶ ರೈತರು ಪಹಣಿ ಹಾಗೂ ಜಮೀನಿಗೆ ಸಂಬಂಧಿಸಿದ ದಾಖಲೆ ಪಡೆಯಲು ನಿತ್ಯ ತಾಲೂಕು ಕಚೇರಿ ಹಾಗೂ ಮನೆಗೆ ಅಲೆಯುತ್ತಿದ್ದಾರೆ. ಇದನ್ನು ತಪ್ಪಿಸಿ ಎಲ್ಲ ದಾಖಲೆಗಳನ್ನು ಒಂದೆಡೆ ಸಿಗುವಂತೆ ಮಾಡಲು ತಾಲೂಕು ಕಚೇರಿ ಅವರಣದಲ್ಲಿ ಇ&ರೂಂ ಸ್ಥಾಪನೆ ಮಾಡಿ, ತಂತ್ರಜ್ಞಾನ ಬಳಸಿ, ಕಂಪ್ಯೂಟರ್​ ಮೂಲಕ ದಾಖಲೆಗಳನ್ನು ಕೊಡುವ ವ್ಯವಸ್ಥೆ ಮಾಡಬೇಕೆಂದು ತಿಳಿಸಿದ ಶಾಸಕ ರಂಗನಾಥ್​, ಇದಕ್ಕಾಗಿ ಐದು ಲಕ್ಷ ರೂಪಾಯಿ ನೀಡುವುದಾಗಿ ಜಿಲ್ಲಾಧಿಕಾರಿಗೆ ಭರವಸೆ ನೀಡಿದರು.

ಇಲಾಖೆ ನಡುಗೆ, ಹಳ್ಳಿಗ ಕಡೆಗೆ: ಅಧಿಕಾರಿಗಳು ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲೇ ಕುಳಿತು, ಕೆಲಸ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶದ ರೈತರ ಸಮಸ್ಯೆ ಪರಿಹರಿಸಲಾಗಿಲ್ಲ. ಹಾಗಾಗಿ ತಹಸೀಲ್ದಾರ್​, ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಗ್ರಾಪಂ ಪಿಡಿಒಗಳನ್ನು ತಾಲೂಕಿನ ಪ್ರತಿಯೊಂದು ಗ್ರಾಮಗಳಿಗೆ ಕರೆದೊಯ್ದು, ಸ್ಥಳದಲ್ಲೇ ಸಮಸ್ಯೆ ಬಗೆಹರಿಸಲು ತೀರ್ಮಾನ ಕೈಗೊಂಡಿದ್ದು, ಇದಕ್ಕೆ ಜಿಲ್ಲಾಧಿಕಾರಿಗಳು ಸಹಕಾರ ನೀಡಬೇಕೆಂದು ಶಾಸಕರು ಮನವಿ ಮಾಡಿದರು. ಕಂದಾಯ ಇಲಾಖೆ ಸಂಬಂಧಿಸಿದಂತೆ 21 ಅರ್ಜಿಗಳು ಸಾರ್ವಜನಿಕರಿಂದ ಸಲ್ಲಿಕೆಯಾಯಿತು. ಎಡಿಸಿ ಚನ್ನಬಸಪ್ಪ, ಸೇರಿ ಕಂದಾಯ, ಸರ್ವೆ ಇಲಾಖೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net