ಪಹಣಿ ತಿದ್ದುಪಡಿ ಬಾಕಿ ಅರ್ಜಿಗಳಿಗೆ ಒಂದೇ ದಿನದಲ್ಲಿ ಮೋಕ್ಷ ; ನನೆಗುದಿಗೆ ಬಿದ್ದಿದ್ದ ಮೋಜಿಣಿ ತಂತ್ರಾಂಶಕ್ಕೆ ವೇಗ

28_Krt_ph_01
Published on

ಕೊರಟಗೆರೆ :ಸುಮಾರು 10 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಮೋಜಿಣಿ ತಂತ್ರಾಂಶದ ಪಹಣಿ ತಿದ್ದುಪಡಿ ಬಾಕಿ ಅರ್ಜಿಗಳನ್ನು ಒಂದೇ ದಿನದಲ್ಲಿ ಕಂದಾಯ ಮತ್ತು ಭೂಮಾಪನಾ ಇಲಾಖೆ ಇತ್ಯರ್ಥಗೊಳಿಸುವಲ್ಲಿ ತಾಲೂಕು ರಾಜ್ಯದಲ್ಲಿ ಮುಂಚೂಣಿಯಲ್ಲಿದೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಕಂದಾಯ ಇಲಾಖೆಯು ಮೋಜಿಣಿ ತಂತ್ರಾಂಶದ ಬಾಕಿ ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡುವಂತೆ ಆದೇಶಿಸಿದೆ. ಜಿಲ್ಲಾಧಿಕಾರಿ ಹಾಗೂ ಭೂ ದಾಖಲೆಗಳ ಉಪನಿರ್ದೇಶಕರ ಮತ್ತು ಮಧುಗಿರಿ ಉಪವಿಭಾಗಾಧಿಕಾರಿಗಳ ನಿರ್ದೇಶನದಂತೆ ತಾಲೂಕನ್ನು ಈ ಕಾರ್ಯದಲ್ಲಿ ಪ್ರಾಯೋಗಿಕ ಯೋಜನೆ (ಪೈಲೆಟ್ ಪ್ರಾಜೆಕ್ಟ್)ಯಾಗಿ ಆಯ್ಕೆ ಮಾಡಿಕೊಂಡು ಸುಮಾರು 10 ವರ್ಷಗಳಿಂದ 11 ಇ ನಕ್ಷೆಗಾಗಿ ಅರ್ಜಿ ಸಲ್ಲಿಸಿದ್ದ ಕಂದಾಯ ಮತ್ತು ಭೂಮಾಪನ ಇಲಾಖೆಯಲ್ಲಿ ಪಹಣಿ ತಿದ್ದುಪಡಿಯ ಬಾಕಿ ಇರುವ 340 ಪ್ರಕರಣಗಳನ್ನು ತಹಸೀಲ್ದಾರ್, ಕಂದಾಯ ಹಾಗೂ ಭೂಮಾಪನ ಇಲಾಖೆ ಅಧಿಕಾರಿಗಳು ಒಂದೇ ದಿನದಲ್ಲಿ ಇತ್ಯರ್ಥಗೊಳಿಸಿದ್ದಾರೆ. ಇದರಲ್ಲಿ ಅ ಮತ್ತು ಬ ಕರಾಬು ತಿದ್ದುಪಡಿ, ದಾನ, ತತ್ಕಾಲ್ ಪೋಡಿ, ವಿಭಾಗ ಮತ್ತು ಕ್ರಯದ ಅರ್ಜಿಗಳಿದ್ದು ಇಲಾಖೆಗೆ ಅಲೆದಾಡುತ್ತಿದ್ದ ಅರ್ಜಿದಾರರಿಗೆ ನೆಮ್ಮದಿ ಸಿಕ್ಕಂತಾಗಿದೆ ಎಂದು ಪ್ರವಾಸಿ ಮಂದಿರದಲ್ಲಿ ಮಂಗಳವಾರ ತಿಳಿಸಿದರು.

ಅನೇಕ ರೈತರ ಪಹಣಿ ತಿದ್ದುಪಡಿ ಪ್ರಕರಣಗಳನ್ನು ಮುಂದಿನ ದಿನಗಳಲ್ಲಿ ಇತ್ಯರ್ಥಗೊಳಿಸುವಂತೆ ಸೂಚಿಸಲಾಗಿದೆ, ಉಳಿದ ಅರ್ಜಿಗಳಾದ ಕಾಲಂ ನಂಬರ್ 3 ಮತ್ತು 9 ಪ್ರಕರಣಗಳು ಮತ್ತು ಹಿಸ್ಸಾ ತಿದ್ದುಪಡಿ ಪ್ರಕರಣಗಳ ತಾಂತ್ರಿಕ ದೋಷಗಳನ್ನು ಸರಿಪಡಿಸಿ ಅವುಗಳನ್ನೂ ಇತ್ಯರ್ಥಗೊಳಿಸಿ ಎಂದು ತಹಸೀಲ್ದಾರ್ ನಾಹೀಮಾ ಜಮ್‌ಜಮ್‌ಗೆ ಸೂಚಿಸಿದರು.

ಅಲೆದು ಸುಮ್ಮನಾಗಿರುವ ರೈತರು : ತಾಲೂಕಿನಲ್ಲಿ ಅರ್ಜಿ ಸಲ್ಲಿಸದ ರೈತರ ಪಹಣಿ ತಿದ್ದ್ದುಪಡಿ ಪ್ರಕರಣಗಳು ಸಾಕಷ್ಟಿದ್ದು, ಇಲಾಖೆಗಳಿಗೆ ಸುತ್ತಲಾರದೆ ರೈತರು ತಿದ್ದುಪಡಿಗೆ ಅರ್ಜಿ ಹಾಕದೆ ಸುಮ್ಮನಿದ್ದಾರೆ. ಈ ತಿದ್ದುಪಡಿ ಪ್ರಕರಣಗಳು ಕಂದಾಯ ಮತ್ತು ಭೂಮಾಪನಾ ಇಲಾಖೆಗೆ ಸಂಬಂಧಿಸಿದ್ದು, ಇಲಾಖೆ ದಾಖಲಾತಿ ಮತ್ತು ಕಡತಗಳ ತಾಂತ್ರಿಕತೆ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಎರಡೂ ಇಲಾಖೆಗಳು ಜಂಟಿಯಾಗಿ ಈ ತಿದ್ದುಪಡಿ ಪ್ರಕರಣಗಳನ್ನು ಗ್ರಾಮವಾರು ವಿಂಗಡಿಸಿ ಸಂಪೂರ್ಣ ಪಹಣಿ ಇಂಡಿಕರಣ ಮಾಡಿದಲ್ಲಿ ರೈತರ ಬಹಳಷ್ಟು ಸಮಸ್ಯೆಗಳಿಗೆ ಸ್ಪಂದಿಸಿದಂತಾಗುತ್ತದೆ. ಈ ಸಂಬಂಧ ರಾಜ್ಯ ಕಂದಾಯ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ತಾಲೂಕು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಶಾಸಕ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಮುಂಬರುವ ದಿನಗಳಲ್ಲಿ ತಾಲೂಕಿನಲ್ಲಿ ಬಾಕಿ ಇರುವ ಬಗರ್‌ಹುಕುಂ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು, ಅರ್ಹತೆ, ಮಾನದಂಡ, ಇಲಾಖೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು. ಭೂಮಿ ಇಲ್ಲದ ರೈತನಿಗೆ ಭೂಮಿ ದೊರೆಯುವಂತೆ ಮಾಡಲಾಗುವ ಜತೆಗೆ ನಿಯಮ ಮೀರಿ ಮಂಜೂರು ಮಾಡುವ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ. ಡಾ.ಜಿ.ಪರಮೇಶ್ವರ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net