ಪಶ್ವಿಮಘಟ್ಟ ಹಿಮಾಲಯ ಪರ್ವತಕ್ಕಿಂತ ಪುರಾತನ

12-GPT-2
ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಹುಲಿಗಿನಮರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ಚಾರಣ ನಡೆಸಿದರು.
Published on

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರ್ವತ ದಿನವನ್ನು ಆಚರಿಸಲಾಯಿತು.

ದಿನಾಚರಣೆ ಅಂಗವಾಗಿ ಭಾನುವಾರ ತಾಲೂಕಿನ ಹುಲಿಗಿನಮರಡಿ ವೆಂಕಟರಮಣಸ್ವಾಮಿ ಬೆಟ್ಟಕ್ಕೆ ಚಾರಣದ ಮೂಲಕ ಕರೆದೊಯ್ದು ಭೂಮಿಯಲ್ಲಿ ಪರ್ವತಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.

ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ. ಮಧು ಮಾತನಾಡಿ, ವಿಶ್ವದಲ್ಲಿ ಅತಿ ಪುರಾತನವಾದ ಅರಾವಳಿ ಪರ್ವತ ಭಾರತದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ವಿಶ್ವದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಪಶ್ಚಿಮಘಟ್ಟ ಕೂಡ ಹಿಮಾಲಯಕ್ಕಿಂತಲೂ ಪುರಾತನವಾದುದು. ಮಂಗಳ ಗ್ರಹದಲ್ಲಿ ಅತಿ ಎತ್ತರದ ಪರ್ವತವಿದೆ. ಹಾಗೆಯೇ ಸಮುದ್ರದಲ್ಲಿ ಮಾನಾ ಕೀ ಎಂಬುದು 10,200 ಅಡಿ ಎತ್ತರವಿರುವ ಪರ್ವತವಿದೆ ಎಂದು ವಿವರಿಸಿದರು. ತಾವೇ ಸೆರೆಹಿಡಿದ ಹಿಮಾಲಯ ಪರ್ವತದ ಛಾಯಾಚಿತ್ರಗಳನ್ನು ಪ್ರದರ್ಶಿಸಿದರು.

ಶಿಕ್ಷಕ ನಂಜುಂಡಸ್ವಾಮಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾನವನ ದಾಹಕ್ಕೆ ಪರ್ವತಗಳೂ ಬಲಿಯಾಗುತ್ತಿವೆ. ಗಣಿಗಾರಿಕೆಯಿಂದ ಪರ್ವತಗಳು ವಿನಾಶ ಹೊಂದುತ್ತಿದ್ದು ನಮ್ಮ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಮುಂದಿನ ಜನಾಂಗಗಳಿಗೆ ಪರ್ವತಗಳನ್ನು ಫೋಟೋಗಳಲ್ಲಿ ತೋರಿಸುವ ಅನಿವಾರ್ಯತೆ ಎದುರಾಗುವ ಭೀತಿಯಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಹಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net