ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ನಿಷೇಧಕ್ಕೆ ಕರ್ನಾಟಕ ಗ್ರೋವರ್ಸ್ ಫೆಡರೇಶನ್ ಒತ್ತಾಯ

ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ನಿಷೇಧಕ್ಕೆ ಕರ್ನಾಟಕ ಗ್ರೋವರ್ಸ್ ಫೆಡರೇಶನ್ ಒತ್ತಾಯ
Published on

ಹಾಸನ: ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಇತ್ತೀಚಿಗೆ ಗಣಿಗಾರಿಕೆ ಹೆಚ್ಚುತ್ತಿದ್ದು, ಅವುಗಳನ್ನು ನಿಷೇಧ ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ಗ್ರೋವರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಕೆ ಬಿ ಕೃಷ್ಣಪ್ಪ ಎಚ್ಚರಿಸಿದರು.
ಕರ್ನಾಟಕ ಗ್ರೋವರ್ಸ್ ಫೆಡರೇಶನ್ ಹಾಗೂ ಪಶ್ಚಿಮಘಟ್ಟ ಉಳಿಸಿ ಜಂಟಿ ಹೋರಾಟ ಸಮಿತಿಯಿಂದ ಪಶ್ಚಿಮ ಘಟ್ಟದ ಕಾಡುಗಳ ಸಾಲಿನಲ್ಲಿ ಬರುವಂತಹ ಕೆಲ ಗ್ರಾಮದಲ್ಲಿ ಗಣಿಗಾರಿಕೆ ಆರಂಭಿಸಿರುವುದರಿಂದ ಆನೆ ಉಪಟಳ ಹೆಚ್ಚಗುವುದರೊಂದಿಗೆ ಪರಿಸರದ ಹಾನಿಯಾಗುತ್ತಿದೆ. 2007ರಲ್ಲಿ ಸಕಲೇಶಪುರ ತಾಲೂಕಿನ ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ಬಗ್ಗೆ ವಿವಿಧ ಇಲಾಖೆಗಳು ಜಂಟಿ ಸ್ಥಳ ಪರಿಶೀಲನೆ ನಡೆಸಿ ಇಲ್ಲಿ ಯಾವುದೇ ರೀತಿಯ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಆದೇಶವನ್ನು ಹೊರಡಿಸಲಾಗಿತ್ತು. ಆದರೆ, ಇತ್ತೀಚಿಗೆ ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿ ಹೊಸಕೋಟೆ ಗ್ರಾಮಕ್ಕೆ ಸೇರಿದ ರೋಡಿಕ್ ಎಸ್ಟೇಟ್‌ನಲ್ಲಿ ಗಣಿಗಾರಿಕೆ ಪ್ರಾರಂಭಿಸಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಎತ್ತಿನಹೊಳೆ ಯೋಜನೆ ಸಂಬಂಧ ನಿರೋದಗಿಸುವ ಉದ್ದೇಶಕ್ಕೂ ತೊಡಕಾಗಲಿದೆ ಆದ್ದರಿಂದ ಹೊಸೂರು ಚಂಗಡಿಹಳ್ಳಿ ಉಚ್ಚಂಗಿ ಗ್ರಾಮಗಳ ಪಂಚಾಯತಿ ವ್ಯಾಪ್ತಿಗಳಲ್ಲಿ ಗಣಿಗಾರಿಕೆ ಸ್ಥಗಿತಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಡಿಎಫ್‌ಓ ಅವರಿಗೆ ಫೆಡರೇಶನ್ ಹಾಗೂ ಸಮಿತಿಯ ಮೂಲಕ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.
ಮತ್ತೊಂದೆಡೆ ಮಲೆನಾಡು ಪ್ರದೇಶದಲ್ಲಿ ಕಾಡಾನೆಗಳ ಹಾವಳಿಯಿಂದ ಕಾಫಿ ಬೆಳೆಗಾರರು ಹಾಗೂ ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಹೆಚ್ಚು ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡಿನ ಉಪಟಳದಿಂದ ತೀವ್ರ ತೊಂದರೆ ಉಂಟಾಗಿದೆ ಆದ್ದರಿಂದ ಕಾಡಾನೆ
ಸೇರಿದಂತೆ ಕಾಡುಪ್ರಾಣಿಗಳನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿ ಎಂ ನಾಗರಾಜ್, ರಾಮಚಂದ್ರ , ಬಿ.ಜಿಯತೀಶ್ , ಪುಟ್ಟೇಗೌಡ, ಬಸಪ್ಪ, ಪುಟ್ಟಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net