ಪಶ್ಚಿಮ ಘಟ್ಟ ಉಳಿಸದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

WhatsApp Image 2023-01-04 at 17.26.47 (1)
Published on

ಸಕಲೇಶಪುರ: ಪಶ್ಚಿಮ ಘಟ್ಟಗಳ ಸಂರಕ್ಷಣಾ ಜಾಗದಲ್ಲಿ ಯಾರಾದರು ಅಕ್ರಮವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಂದು ಪಶ್ಚಿಮ ಘಟ್ಟ ಸಂರಕ್ಷಣಾ ಸಮಿತಿ ಅಧ್ಯಕ್ಷ ಗೋವಿಂದ ನಾಯಕ ಭಟ್ಕಳ ಹೇಳಿದರು.

ತಾಲೂಕಿನ ಹಾನುಬಾಳ್ ಗ್ರಾ.ಪಂ. ವ್ಯಾಪ್ತಿಯ ಮೂರುಕಣ್ಣು ಗುಡ್ಡ ರಕ್ಷಿತಾರಣ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿ, ತಾಲೂಕಿನ ಮೂರುಕಣ್ಣು ಗುಡ್ಡ ರಕ್ಷಿತಾರಣ್ಯದಲ್ಲಿ ರೆಸಾರ್ಟ್ ಮಾಲಿಕರೊಬ್ಬರು ಅಕ್ರಮವಾಗಿ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಅನುಮತಿ ಪಡೆಯದೆ ಗುಡ್ಡವನ್ನು ಬಗೆದು ರಸ್ತೆ ಮಾಡಿದ ಹಿನ್ನೆಲೆಯಲ್ಲಿ ದೂರು ದಾಖಲಿಸಿ ಜೆಸಿಬಿಯನ್ನು ವಶಡಿಸಿಕೊಳ್ಳಲಾಗಿದೆ. ಹಾಗಾಗಿ, ವಾಸ್ತವ ಸ್ಥಿತಿಯನ್ನು ಪರಿಶೀಲಿಸಿದ್ದೇನೆ. ಮೇಲ್ನೋಟಕ್ಕೆ ರೆಸಾರ್ಟ್‌ನವರು ಇಲ್ಲಿ ಅಕ್ರಮವಾಗಿ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದು ಸಾಬೀತಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ರಕ್ಷಿತಾರಣ್ಯಗಳಲ್ಲಿ ಅತಿಕ್ರಮಣ ಪ್ರವೇಶದಿಂದ ವನ್ಯಜೀವಿಗಳ ಅಸ್ತಿತ್ವಕ್ಕೆ ಸಂಚಕಾರ ಬರುವ ಸಾಧ್ಯತೆ ಇದೆ. ಕೆಲವು ರೆಸಾರ್ಟ್ ಹಾಗೂ ಹೋಂಸ್ಟೇಗಳ ಮಾಲೀಕರು ಪ್ರವಾಸಿಗರನ್ನು ಅನಧಿಕೃತವಾಗಿ ರಕ್ಷಿತಾರಣ್ಯಗಳಿಗೆ ಟ್ರಕ್ಕಿಂಗ್‌ಗೆ ಕರೆದುಕೊಂಡು ಹೋಗುತ್ತಿರುವುದು ತಿಳಿದುಬಂದಿದೆ. ಈ ಸಂಬಂಧ ಹಲವಾರು ಪ್ರಕರಣಗಳು ಈಗಾಗಲೆ ದಾಖಲಾಗಿದೆ ಎಂದರು.

ವಶಪಡಿಸಿಕೊಂಡ ಜೆಸಿಬಿ ಯಂತ್ರವನ್ನು ಹಿಂತಿರುಗಿಸಲಾಗಿದೆ. ಪ್ರಕರಣದ ಕುರಿತು ಸೂಕ್ಷ್ಮವಾಗಿ ಪರಿಶೀಲಿಸಿ ಆರೋಪಿಗಳು ಕಾನೂನಿನಡಿಯಿಂದ ತಪ್ಪಿಸಿಕೊಳ್ಳದಂತೆ ಕ್ರಮವಹಿಸಲು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ ಎಂದರು.

ಪಶ್ಚಿಮಘಟ್ಟದ ಅತಿಸೂಕ್ಷ್ಮ ಶೋಲಾರಣ್ಯದ ಒಳಪದರಗಳು ವರ್ಷವಿಡಿ ನದಿಗಳಿಗೆ ಹರಿಸುವಷ್ಟು ನೀರನ್ನು ಸಂಗ್ರಹಿಸಿಟ್ಟಿರುತ್ತವೆ. ಘಟ್ಟದಲ್ಲಿ ತಲೆ ಎತ್ತಿರುವ ಮಾಫಿಯಾಗಳು ಶೋಲಾರಣ್ಯದ ಮೇಲ್ಪದರಕ್ಕೆ ಭಾರಿ ಪ್ರಮಾಣದಲ್ಲಿ ಹಾನಿ ಮಾಡುತ್ತಲೇ ಇದ್ದಾರೆ. ಇದರಿಂದ ಮಣ್ಣಿನ ಒಳಪದರದ ನೀರಿನ ಧಾರಣಾ ಸಾಮರ್ಥ್ಯ ದಿಢೀರ್ ತಗ್ಗಿ ಜಲಸ್ಫೋಟ ಸಂಭವಿಸುತ್ತದೆ. ಕಳೆದ ಬಾರಿ ಮತ್ತು ಈ ವರ್ಷ ಪಶ್ಚಿಮ ಘಟ್ಟದಲ್ಲಿ ಭೂಕುಸಿತವಾಗಿದ್ದಕ್ಕೆ ಮಾನವ ಹಸ್ತಕ್ಷೇಪವೇ ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಮಾನವನ ಹಸ್ತಕ್ಷೇಪ ತಡೆದು ಪಶ್ಚಿಮಘಟ್ಟವನ್ನು ಅದರ ಪಾಡಿಗೆ ಬಿಡಲು ಸರ್ಕಾರ ಕಠಿಣ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್, ವಲಯ ಅರಣ್ಯಾಧಿಕಾರಿ ಶಿಲ್ಪಾ, ಕಂದಾಯ, ಪ್ರವಾಸೋದ್ಯಮ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net