

ಶಿವಮೊಗ್ಗ: ಪಶ್ಚಿಮಘಟ್ಟ ಪ್ರದೇಶದಲ್ಲಿ ಯಂತ್ರ ಬಳಕೆ ಮಾಡದಂತೆ ಗೇರು ಅಭಿವೃದ್ಧಿ ನಿಗಮಕ್ಕೆ ನಿರ್ಬಂಧ ವಿಧಿಸಬೇಕೆಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ ಅನಂತ ಹೆಗಡೆ ಅಶೀಸರ ಅರಣ್ಯ ಇಲಾಖೆ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗೆ ಸೂಚಿಸಿದ್ದಾರೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗೇರು ನೆಡುತೋಪು ನಿರ್ವಿುಸಲು 20 ವರ್ಷದ ಹಿಂದೆ ಅರಣ್ಯ ಇಲಾಖೆ ಗೇರು ಅಭಿವೃದ್ಧಿ ನಿಗಮಕ್ಕೆ ಸಾವಿರಾರು ಎಕರೆ ಭೂಮಿ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಇಳಿಜಾರು, ಗುಡ್ಡ, ನದಿ ಕಣಿವೆಗಳ ಪ್ರದೇಶದಲ್ಲಿರುವ ನೆಡುತೋಪುಗಳಲ್ಲಿ ಗೇರು ಗಿಡಗಳ ಜತೆ ಅಪಾರ ಸಸ್ಯ ಸಂಕುಲವಿದೆ. ವಿನಾಶದ ಅಂಚಿನ ವೃಕ್ಷ ವೈವಿಧ್ಯವಿದೆ. ಜಲಮೂಲಗಳಿವೆ. ಔಷಧಿ ಸಸ್ಯಗಳ ಆಗರವಿದೆ.
ಗೇರು ನೆಡುತೋಪುಗಳ ನಿರ್ವಹಣೆಗೆ ಗೇರು ಅಭಿವೃದ್ಧಿ ನಿಗಮದಿಂದ ಜೆಸಿಬಿ ಮುಂತಾದ ಯಂತ್ರಗಳ ಬಳಕೆ ಮಾಡಲಾಗುತ್ತಿದೆ. ಇದರಿಂದ ಸಸ್ಯ ಸಂಕುಲ ನಾಶವಾಗುತ್ತಿದೆ. ಗೇರು ಅಭಿವೃದ್ದಿ ನಿಗಮ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಯಂತ್ರ ಉಪಯೋಗಿಸದೇ ನಿರ್ವಹಣೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಹೊಸನಗರ ತಾಲೂಕಿನ ಹನಿಯ ಗ್ರಾಮದ ಕಡಿದಾದ ಗುಡ್ಡ, ತೀರ್ಥಹಳ್ಳಿ ತುಂಗಾ ಕಣಿವೆಯಲ್ಲಿ ಇಂಥ ನೆಡುತೋಪುಗಳಿವೆ. ಯಂತ್ರಗಳ ಮೂಲಕ ನೆಡು ತೋಪು ನಿರ್ವಿುಸುವುದು ಅಪಾಯಕಾರಿ. ಇದು ಭೂ ಕುಸಿತಕ್ಕೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಬಳಿಯ ಎಡಗುಡ್ಡೆ ಪ್ರದೇಶದ 380 ಎಕರೆ ಪ್ರದೇಶದಲ್ಲಿ 25 ವರ್ಷ ಹಿಂದೆ ಗೇರು ನಿಗಮದಿಂದ ಗಿಡ ನೆಡಲಾಗಿತ್ತು. ಈ ಗುಡ್ಡದಲ್ಲಿ 1.20 ಲಕ್ಷ ಸ್ವಾಭಾವಿಕ ಮರಗಳಿವೆ. ಹೀಗಾಗಿ ಜೆಸಿಬಿ ಮುಂತಾದ ಯಂತ್ರಗಳ ಬಳಕೆ ಮಾಡುವುದು ಸರಿಯಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.