

ಮೈಸೂರು: ಕೇಂದ್ರ ಸರ್ಕಾರದ ಪಶುಸಂಗೋಪನೆ ಶ್ರೇಷ್ಠತೆ ಕೇಂದ್ರದ ವತಿಯಿಂದ ಜಾನುವಾರು ಉದ್ಯಮಿಗಳಿಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಸುತ್ತೂರಿನ ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚಿಗೆ ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನ ಪಶುಸಂಗೋಪನೆ ಶ್ರೇಷ್ಠತೆ ಕೇಂದ್ರದ ಜಂಟಿ ಆಯುಕ್ತ ಡಾ. ಎಚ್ ತೆಗ್ಗಿ ಮಾತನಾಡಿ, ಪಶುಸಂಗೋಪನೆಯು ಒಂದು ಲಾಭದಾಯಕ ಉದ್ಯಮವಾಗಿದೆ. ರೈತರು ವೈಜ್ಞಾನಿಕ ಮಾಹಿತಿಯನ್ನು ಪಡೆದು ತಾಂತ್ರಿಕ ವಿಷಯ ಅಳವಡಿಸಿಕೊಂಡು ಪಶುಸಂಗೋಪನೆ ಮಾಡಿದರೆ ಹೆಚ್ಚಿನ ಆದಾಯಗಳಿಸಬಹುದು. ಜತೆಗೆ, ಸ್ವ ಉದ್ಯಮ ಸೃಷ್ಟಿ ಮಾಡಿಕೊಳ್ಳಬಹುದು. ಇತರ ರೈತರಿಗೆ ಮಾದರಿಯಾಗಬಹುದು ಎಂದು ತಿಳಿಸಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ಮಾತನಾಡಿ, ಕಡಿಮೆ ವೆಚ್ಚದಿಂದ ಕೊಟ್ಟಿಗೆ ನಿರ್ಮಿಸಿಕೊಂಡು ವೈಜ್ಞಾನಿಕವಾಗಿ ಕುರಿ ಮೇಕೆ ಸಾಕಣೆಯನ್ನು ಮಾಡಬೇಕು.
ಹಲವು ತಿಂಗಳು ಅನುಭವ ಪಡೆದು ಮುಂದಿನ ಹಂತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರಿ, ಮೇಕೆ ಸಾಕಣೆ ಮಾಡಬೇಕು. ಇಲಾಖೆ ಸದಾ ರೈತರ ಸೇವೆಗೆಂದು ಇದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಐಸಿಎಆರ್ ಜೆಎಸ್‌ಎಸ್ ಕೃಷಿ ಇಲಾಖೆ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್. ಜ್ಞಾನೇಶ್ ಮಾತನಾಡಿ, ರೈತರು ಮಾರುಕಟ್ಟೆ ಕಡೆ ಹೆಚ್ಚು ಗಮನಹರಿಸಿ ಕುರಿ, ಮೇಕೆ ಸಾಕಣೆ ಮಾಡಬೇಕು.
ನಮ್ಮ ಸಂಸ್ಥೆಯಲ್ಲಿ ನಿರಂತರವಾಗಿ ತರಬೇತಿಗಳು ನಡೆಯುತ್ತಿದ್ದು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೈಜ್ಞಾನಿಕ ಮಾಹಿತಿ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಡಾ. ರಾಜೇಶ್, ಡಾ. ದಿವ್ಯಾ, ಡಾ. ರಕ್ಷಿತ್ ರಾಜ್, ಡಾ. ಪ್ರಸಾದ್, ಡಾ. ದೀಪಕ್, ಪ್ರಗತಿಪರ ರೈತರಾದ ಹೇಮಂತ್ ಕುಮಾರ್, ಮಹೇಶ್, ಮಲ್ಲೇಶ್, 60ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.