ಪಶುಸಂಗೋಪನ ಇಲಾಖೆ ಕ್ರಮ ಸ್ವಾಗತಾರ್ಹ

nagesh angirasa
ಕೊಪ್ಪ ತಾಲೂಕು ಹೇರೂರು ಕೆಮ್ಮಣ್ಣು ಶ್ರೀಕಾಮಧೇನು ಗೋ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಂಗೀರಸ
Published on

ಚಿಕ್ಕಮಗಳೂರು: ಮಲೆನಾಡು ಗಿಡ್ಡ ಹಸುಗಳು ಸಂರಕ್ಷಣೆಗೆ ಶಾಶ್ವತ ಗೋಮಾಳ ಮೀಸಲಿಡಲು ಪಶುಸಂಗೋಪನಾ ಇಲಾಖೆ ಮುಂದಾಗಿರುವುದು ಉತ್ತಮ ಬೆಳವಣಿಗೆ ಎಂದು ಕೊಪ್ಪ ತಾಲೂಕು ಹೇರೂರು ಕೆಮ್ಮಣ್ಣು ಶ್ರೀಕಾಮಧೇನು ಗೋ ಸೇವಾ ಟ್ರಸ್ಟ್ ಅಧ್ಯಕ್ಷ ನಾಗೇಶ್ ಅಂಗೀರಸ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಕಳಸಾ ತಾಲೂಕಿನ ಮಾವಿನಕೆರೆ ಗ್ರಾಮದ ಖ್ಯಾತನಮಕ್ಕಿ ಹುಲ್ಲುಗಾವಲು ಪ್ರದೇಶವನ್ನು ಮಲೆನಾಡು ಗಿಡ್ಡು ಹಸುಗಳ ಸಂರಕ್ಷಣೆಗೆ ಶಾಶ್ವತ ಗೋಮಾಳವನ್ನಾಗಿ ಮೀಸಲಿಡುವ ಜೊತೆಗೆ ಕ್ಷೀಣಿಸುವ ಹಂತದಲ್ಲಿರುವ ಗಿಡ್ಡ ಗೋತಳಿಯ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಕಾರ್ಯಕ್ಕೆ ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಡಳಿತದ ವಿಶೇಷ ಪ್ರಯತ್ನದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ದೇಶದ ವಿಶಿಷ್ಟ ಗೋ ಸಂತತಿ ಮಲೆನಾಡು ಗಿಡ್ಡಗಳು ಕೇವಲ ಪಶ್ಚಿಮ ಘಟ್ಟ ಪ್ರದೇಶಗಳ ಹವಾಮಾನಕ್ಕೆ ಗಾಳಿ, ಚಳಿ, ಬಿಸಿಲಿಗೆ ಹೊಂದಿಕೊAಡು ಬದುಕುವಂತಹವುಗಳಾಗಿವೆ. ಪ್ರಸ್ತುತ ಈ ತಳಿ ಮಾನ್ಯತೆಯೊಂದಿಗೆ ವಿಶಿಷ್ಟ ತಳಿಯ ಸಾಲಿನಲ್ಲಿದ್ದು, ಪಶ್ಚಿಮ ಘಟ್ಟಗಳ ಅತೀ ಹೆಚ್ಚು ಮಳೆ ಬೀಳುವ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಜಿಲ್ಲೆಯ ಕೆಲವು ಭಾಗ ಕರಾವಳಿ ಜಿಲ್ಲೆಗಳಾದ ಉಡುಪಿ, ಮಂಗಳೂರು, ಕಾರವಾರ ವ್ಯಾಪ್ತಿಯಲ್ಲಿ ಈ ತಳಿ ಇದೆ. ೧೫ ರಿಂದ ೨೫ ವರ್ಷದವರೆಗೂ ಗಟ್ಟಿಯಾಗಿ ಬದುಕಬಲ್ಲ ಜಾನುವಾರುಗಳ ಇವಾಗಿವೆ ಎಂದರು.

ಮಲೆನಾಡಿನಲ್ಲಿ ಹಿಂದೆ ಕೊಟ್ಟಿಗೆಯಲ್ಲಿ ಹಸು ಇದ್ದರೆ ಶ್ರೀಮಂತ ಎಂದು ಕರೆಯಲಾಗುತ್ತಿತ್ತು. ಕೃಷಿ ಜಮೀನು ಹೊಂದಿರುವ ರೈತ ಈ ಮಲೆನಾಡು ಗಿಡ್ಡಗಳಿಲ್ಲದೆ ಕೃಷಿ ಚಟುವಟಿಕೆ ನಡೆಸಲಾಗುವುದಿಲ್ಲ ಎಂದು ಹೇಳಿದರು.

ನೂರಾರು ಎಕರೆ ಗೋಮಾಳವನ್ನು ಮಲೆನಾಡು ಗಿಡ್ಡಗಳ ಮೇವಿಗಾಗಿಯೇ ಮೀಸಲಿದ್ದು, ಪ್ರಸ್ತುತ ಈ ಎಲ್ಲಾ ಪ್ರದೇಶ ಬಲಾಢ್ಯರ ಪಾಲಾಗಿರುವುದರಿಂದ ಮೇಯಲು ಜಾಗವಿಲ್ಲದೆ ಹಸಿವಿನಿಂದ ತತ್ತರಿಸಿ ಪ್ರಾಣ ಬಿಡುತ್ತಿವೆ. ಜೊತೆಗೆ ಮಾಂಸ ಮಾಫಿಯಾದ ಪಾಲಾಗುತ್ತಿವೆ ಎಂದು ತಿಳಿಸಿದರು.

ಕಂಪನಿ ಎಸ್ಟೇಟ್‌ಗಳು ಹಾಗೂ ಮಾಲೀಕರ ಮಿತಿ ಮೀರಿದ ಕ್ರೌರ್ಯ ಕಾರ್ಮಿಕರ ರೂಪದಲ್ಲಿ ಕಳ್ಳ ಸಾಗಾಣಿಕೆ ಮಾಡುತ್ತಿರುವ ವಲಸೆ ರೋಹಿಂಗ್ಯಾಗಳ ಕ್ರೌರ್ಯಕ್ಕೆ ಅಳಿದುಳಿದ ಗೋವುಗಳು ಬಲಿಯಾಗುತ್ತಿವೆ. ಈ ನಿಟ್ಟಿನಲ್ಲಿ ಗೋಮಾಳ ಸಂರಕ್ಷಿಸುವ ಮೂಲಕ ಗಿಡ್ಡ ತಳಿ ಗೋವುಗಳನ್ನು ಉಳಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net