ಪಶು ಸಂಪತ್ತು ನಿರ್ಲಕ್ಷಿಸಿದರೆ ಅಭಿವೃದ್ಧಿಯಾಗದು

23byd2
Published on

ಬ್ಯಾಡಗಿ: ಪಶು ಸಂಪತ್ತು ರೈತನ ಆಸ್ತಿಯಾಗಿದ್ದು, ನಿರ್ಲಕ್ಷಿಸಿದರೆ ಅಭಿವೃದ್ಧಿ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರೈತ ಸಮುದಾಯ ಕೃಷಿಯೊಂದಿಗೆ ಜಾನುವಾರುಗಳನ್ನು ಉಳಿಸಿಕೊಳ್ಳಬೇಕು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ತಾಲೂಕಿನ ಶಿಡೇನೂರು ಗ್ರಾಮದಲ್ಲಿ ನಬಾರ್ಡನ ಆರ್​ಐಡಿಎಫ್ ಯೋಜನೆಯಡಿ ಪಶು ಆಸ್ಪತ್ರೆ ನೂತನ ಕಟ್ಟಡಕ್ಕೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ತಾಲೂಕಿನ ಶಿಡೇನೂರು ಆಸ್ಪತ್ರೆ ವ್ಯಾಪ್ತಿಯ ಶಿಡೇನೂರು, ತಡಸ, ಕಾಟೇನಹಳ್ಳಿ, ಶಿವಾಜಿನಗರ, ನಂದಿಹಳ್ಳಿ ಗ್ರಾಮಗಳಲ್ಲಿ 3680 ಜಾನುವಾರುಗಳಿವೆ. ಈವರೆಗೂ ಹಳೇ ಕಟ್ಟಡದಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು, ಹೊಸದಾಗಿ 21 ಲಕ್ಷ ರೂ. ಗಳಲ್ಲಿ ಆಸ್ಪತ್ರೆ ಕಟ್ಟಡ ನಿರ್ವಣವಾಗಲಿದೆ. ತಾಲೂಕಿನ 16 ಪಶು ಆಸ್ಪತ್ರೆಗಳ ಪೈಕಿ ಎಲ್ಲ ಕಡೆ ಸ್ವಂತ ಹಾಗೂ ಉತ್ತಮ ಕಟ್ಟಡಗಳಿವೆ. ಕೃಷಿ ಚಟುವಟಿಕೆಯೊಂದಿಗೆ ಹೈನುಗಾರಿಕೆ ಹಾಗೂ ಕುರಿ ಸಾಕಾಣಿಕೆ, ಕೋಳಿ ಹಾಗೂ ಮೊಲ ಸಾಕಾಣಿಕೆ ಲಾಭದಾಯಕವಾಗಿವೆ. ಇದಕ್ಕಾಗಿ ಸರ್ಕಾರ ವಿಶೇಷ ಯೋಜನೆ ಹಾಗೂ ಸಹಾಯಧನ ನೀಡುತ್ತಿದೆ. ಹಾಲು ಉತ್ಪಾದಕರಿಗೆ 5 ರೂ. ಸಹಾಯಧನ ಲಭ್ಯವಿದೆ ಎಂದರು.

ಜಿಪಂ ಸದಸ್ಯೆ ಸುಮಂಗಲಾ ಪಟ್ಟಣಶೆಟ್ಟಿ, ತಾಪಂ ಅಧ್ಯಕ್ಷೆ ಸವಿತಾ ಸುತ್ತಕೋಟಿ, ಮಾಜಿ ಜಿಪಂ ಅಧ್ಯಕ್ಷ ಶಂಕ್ರಪ್ಪ ಮಾತನವರ, ಮಾಜಿ ಸದಸ್ಯರಾದ ರಮೇಶ ಸುತ್ತಕೋಟಿ, ಶಿವಬಸಪ್ಪ ಕುಳೇನೂರು, ಮಾಜಿ ಗ್ರಾಪಂ ಸದಸ್ಯರಾದ ಪರಮೇಶಗೌಡ್ರ ತೆವರಿ, ಚನ್ನಬಸನಗೌಡ್ರ ದ್ಯಾಮನಗೌಡ್ರ, ಪಾಂಡಪ್ಪ ಲಮಾಣಿ, ವೈದ್ಯರಾದ ಡಾ. ಎನ್.ಎಸ್. ಚೌಡಾಳ, ನಾಗರಾಜ ಬಣಕಾರ, ಗ್ರಾಮಸ್ಥರಾದ ಬಸನಗೌಡ್ರ ಪಾಟೀಲ, ಮಂಜಪ್ಪ ಪೂಜಾರ, ಈರಪ್ಪ ಪೂಜಾರ ಇತರರಿದ್ದರು.

ಮೊಬೈಲ್ ಕ್ಲಿನಿಕ್ ಜಿಲ್ಲೆಗೆ ಶೀಘ್ರ

ಹಾವೇರಿ ಪಾಲಿಕ್ಲಿನಿಕ್ ಉಪನಿರ್ದೇಶಕ ಎಂ. ಗೋಪಿನಾಥ ಮಾತನಾಡಿ, ಸರ್ಕಾರ ಇತ್ತೀಚೆಗೆ ಆರಂಭಿಸಿದ ಪಶುಸಂಜೀವಿನಿ ಯೋಜನೆಯ ಮೊಬೈಲ್ ಕ್ಲಿನಿಕ್ ಹೊಸ ಕಾರ್ಯಕ್ರಮ ಶೀಘ್ರದಲ್ಲೇ ಹಾವೇರಿ ಜಿಲ್ಲೆಗೆ ಲಭಿಸಲಿದೆ. ಇದರಿಂದ ಜಾನುವಾರುಗಳಿಗೆ ಎಲ್ಲ ಹಂತದ ಚಿಕಿತ್ಸೆ ಸ್ಥಳದಲ್ಲಿ ಲಭ್ಯವಾಗುವ ಮೂಲಕ ತುರ್ತು ಚಿಕಿತ್ಸೆಗೆ ಒತ್ತು ನೀಡಲಾಗಿದೆ. ಹಾವೇರಿಯಲ್ಲಿ 2.20 ಕೋಟಿ ರೂ. ವೆಚ್ಚದ ಸುಸಜ್ಜಿತ ಪಶು ಆಸ್ಪತ್ರೆ ಕಟ್ಟಡ ಪೂರ್ಣಗೊಂಡಿದ್ದು, ಹಸ್ತಾಂತರ ಬಾಕಿಯಿದೆ ಎಂದರು. ತಾಲೂಕು ಮಟ್ಟದಲ್ಲಿ ಸಂಚಾರಿ ಅಸ್ಪತ್ರೆ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಹೊಲಗದ್ದೆಗಳಲ್ಲಿ ಜಾನುವಾರು ಸಾಕಿದ ಸ್ಥಳ ಹಾಗೂ ತುರ್ತು ಸಂದರ್ಭದಲ್ಲಿ ಮನೆಮನೆಗೂ ತೆರಳಿ ಚಿಕಿತ್ಸೆ ನೀಡುತ್ತಿದ್ದೇವೆ. ಜಿಲ್ಲೆಯ ವಿವಿಧೆಡೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರೈತರು ಮುಂಜಾಗ್ರತೆ ವಹಿಸಬೇಕು. ರೋಗದ ಲಕ್ಷಣವಿದ್ದಲ್ಲಿ ತಕ್ಷಣ ಪಶು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಬೇಕು. ಇದಕ್ಕಾಗಿ ಲಸಿಕೆಗಳು ಲಭ್ಯವಾಗಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net