ಪಶು ಸಂಜೀವಿನಿ ವಾಹನಕ್ಕೆ ಚಾಲನೆ

Pasu Sanjivini
Published on

ಬೀದರ್: ನಗರದ ಅಂಬೇಡ್ಕರ್ ವೃತ್ತ ಹತ್ತಿರದ ಪ್ರವಾಸಿ ಮಂದಿರದಲ್ಲಿ ಬುಧವಾರ ಪಶುಗಳ ಶಸ್ತ್ರ ಚಿಕಿತ್ಸೆಗಾಗಿ ಸುಸಜ್ಜಿತ ಶಸ್ತ್ರ ಚಿಕಿತ್ಸಾ ವಾಹನ ಪಶು ಸಂಜೀವಿನಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಾಯಿತು.
ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ವಾಹನಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಶಸ್ತ್ರ ಚಿಕಿತ್ಸೆ ಮಾಡಬೇಕಾದ ಜಾನುವಾರುಗಳನ್ನು ಪಶು ಚಿಕಿತ್ಸಾಲಯಕ್ಕೆ ಸಾಗಾಣಿಕೆ ಮಾಡಲು ತೊಂದರೆಯಿದ್ದಲ್ಲಿ ಹಾಗೂ ಶಸ್ತ್ರ ಚಿಕಿತ್ಸೆಗಾಗಿ ತಜ್ಞ ವೈದ್ಯರ ಅವಶ್ಯಕತೆ ಇದ್ದಲ್ಲಿ 1962ಕ್ಕೆ ರೈತರು ಕರೆ ಮಾಡಿದಲ್ಲಿ ಶಸ್ತ್ರ ಚಿಕಿತ್ಸೆಯ ಅತ್ಯಾಧುನಿಕ ಉಪಕರಣಗಳನ್ನು ಹೊಂದಿರುವ ವಾಹನ ಪಶು ಸಂಜೀವಿನಿ ತಜ್ಞವೈದ್ಯರೊಂದಿಗೆ ರೈತರ ಮನೆ ಬಾಗಿಲಿಗೆ ಹೋಗಿ ಶಸ್ತ್ರ ಚಿಕಿತ್ಸೆಯ ಸೌಕರ್ಯ ಒದಗಿಸಲಿದೆ ಎಂದರು.
ರಾಜ್ಯದ ಪ್ರತಿ ಜಿಲ್ಲೆಗೆ ಒಂದರಂತೆ ಹಾಗೂ ಬೆಂಗಳೂರು ನಗರಕ್ಕೆ 10 ಸೇರಿ 41 ಪಶು ಸಂಜೀವಿನಿ ವಾಹನಗಳು ಕಾರ್ಯನಿರ್ವಹಿಸುತ್ತವೆ. ರೈತರು ಈ ವಾಹನಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾಧಿಕಾರಿ ಆರ್.ರಾಮಚಂದ್ರನ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಮಲ್ಲಿಕಾರ್ಜುನ ಹಂಚಿನಾಳ, ಪಶು ವೈದ್ಯಾಧಿಕಾರಿಗಳಾದ ಡಾ.ಗೌತಮ ಅರಳಿ, ಬಸವರಾಜ ನಿಟ್ಟೂರೆ, ಪಾಲಿಕ್ಲಿನಿಕ್ನ ಉಪ ನಿರ್ದೇಶಕ ರವಿಕುಮಾರ ಭೂರೆ, ಇಲಾಖೆ ಸಹಾಯಕ ಆಡಳಿತಾಧಿಕಾರಿ ಸಿದ್ದಪ್ಪ ಪಾಟೀಲ್, ಹಿರಿಯ ಪಶು ವೈದ್ಯಕೀಯ ಪರೀಕ್ಷಕ ವಿಶ್ವನಾಥ ಬಾದಾಮಿ, ಕಚೇರಿಯ ಅಧೀಕ್ಷಕ ಚಂದ್ರಶೇಖರ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net