

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪಶು ವೈದ್ಯರು ಹಾಗೂ ಡಿ ಗ್ರೂಪ್ ನೌಕರರ ಕೊರತೆಯನ್ನು ನೀಗಿಸಬೇಕು ಮತ್ತು ಪಶು ವೈದ್ಯಕೀಯ ಆಸ್ಪತ್ರೆಗಳಲ್ಲಿ ಸೂಕ್ತ ಸಮಯಕ್ಕೆ ಬೇಕಾಗುವ ಔಷಧಗಳು ದೊರೆಯುವಂತೆ ವ್ಯವಸ್ಥೆ ಕಲ್ಪಿಸುವಂತೆ ಕಾಂಗ್ರೆಸ್ ಮುಖಂಡರು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಭರತ್ ಉಪ್ಪಳ್ಳಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯು ಮಲೆನಾಡು, ಅರೆ ಮಲೆನಾಡು ಮತ್ತು ಬಯಲು ಸೀಮೆಯನ್ನು ಒಳಗೊಂಡಿರುವ ಜಿಲ್ಲೆಯಾಗಿದೆ. ರೈತರು ಮತ್ತು ಕಾಫಿ ಬೆಳೆಗಾರರು, ತೆಂಗು, ಅಡಕೆ ಬೆಳೆಯುವ ಎಲ್ಲರೂ ಕೂಡ ತಮ್ಮ ಮನೆಗಳಲ್ಲಿ, ತೋಟ, ಜಮೀನುಗಳಲ್ಲಿ ಗೊಬ್ಬರ ಮತ್ತು ಹೈನುಗಾರಿಕೆಗೆ ಹಸು, ಎಮ್ಮೆಗಳನ್ನು ಸಾಕಿಕೊಂಡಿದ್ದು, ಇದರಿಂದ ಅವರಿಗೆ ಹಾಲಿನಿಂದ ಸ್ಪಲ್ಪ ಆದಾಯ ಬರುವಂತಾಗಿದೆ ಎಂದು ತಿಳಿಸಿದರು.
ಬಹುತೇಕರು ಜಮೀನು ಹಾಗೂ ತೋಟಗಳಲ್ಲಿ ಕಾವಲುಗಾರರಾಗಿ ನಾಯಿಗಳನ್ನು ಸಾಕಿಕೊಂಡಿದ್ದು, ಹಸು, ಎಮ್ಮೆ ಮತ್ತು ನಾಯಿಗಳಿಗೆ ಆಯಾ ಕಾಲಘಟ್ಟಕ್ಕೆ ಸಾಮಾನ್ಯ ಪರೀಕ್ಷೆಗೆ ಒಳಪಡಿಸಲು ತುರ್ತು ಚಿಕಿತ್ಸೆ ಕೊಡಿಸಲು ಅಥವಾ ಅನಾರೋಗ್ಯಕ್ಕೆ ಒಳಪಟ್ಟಾಗ ಹತ್ತಿರದ ಪಶು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಇರುವುದಿಲ್ಲ. ಶುಶ್ರೂಕರು ಅಥವಾ ಶುಶ್ರೂಕಿಯರು ಇದ್ದು, ಅವರಿಗೆ ಮಾಹಿತಿ ಕೊರತೆಯಿಂದ ಚಿಕಿತ್ಸೆ ಹೇಗೆ ನೀಡಬೇಕು ಎಂಬುದು ತಿಳಿದಿರುವುದಿಲ್ಲ ಎಂದರು.
ಜಿಲ್ಲೆ ಮತ್ತು ತಾಲೂಕು ವ್ಯಾಪ್ತಿಯಲ್ಲಿರುವ ಪಶು ಆಸ್ಪತ್ರೆಯ ಹತ್ತಿರವೆ ವೈದ್ಯರಿಗೆ ಮತ್ತು ಶುಶ್ರೂಕರು ಹಾಗೂ ಶುಶ್ರೂಕಿಯರಿಗೆ ಉತ್ತಮವಾದ ವಸತಿ ಗೃಹಗಳನ್ನು ನಿರ್ಮಿಸಿಕೊಡಬೇಕು. ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಪಶು ಆಸ್ಪತ್ರೆಗಳು ದುಸ್ಥಿತಿಯಲ್ಲಿದ್ದು, ಅವುಗಳನ್ನು ದುರಸ್ಥಿಗೊಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪಶು ವೈದ್ಯಕೀಯ ಶಿಕ್ಷಣವನ್ನು ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸೂಕ್ತ ಸೌಲಭ್ಯಗಳನ್ನು ಒದಗಿಸಿ, ಪಶು ವೈದ್ಯಕೀಯ ಶಿಕ್ಷಣವನ್ನು ಓದಲು ವಿದ್ಯಾರ್ಥಿಗಳಿಗೆ ಪ್ರೇರೆಣೆಯಾಗುವಂತೆ ಹಾಗೂ ಕಾಲೇಜುಗಳಲ್ಲಿ ಶಿಕ್ಷಣದ ಬಗ್ಗೆ ಇರುವ ಅಡೆ ತಡೆಗಳನ್ನು ನಿವಾರಣೆಗೊಳಿಸಿ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಲು ಕಾರ್ಯಾಗಾರ ಹಮ್ಮಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಅಂಶುಮAತ್, ಸಿಡಿಎ ಅಧ್ಯಕ್ಷ ಮಹಮದ್ ನಯಾಜ್ ಮತ್ತಿತರರಿದ್ದರು.