

ತ್ಯಾಗರ್ತಿ: ಪಶು ವೈದ್ಯಕೀಯ ಇಲಾಖೆಯಲ್ಲಿ ಮಾಡುವ ಕೆಲಸಗಳು ಗೋಸೇವೆಗೆ ಇರುವ ಅವಕಾಶ ಎಂದು ಜಾನುವಾರು ಅಭಿವೃದ್ಧಿ ಅಕಾರಿ ಸುದೇಶಿ ಹೇಳಿದರು.
ನೀಚಡಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಂಘದ ವಾರ್ಷಿಕ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, 1993ರಲ್ಲಿ ಸಾಗರ ತಾಲೂಕಿನ ಉಳ್ಳೂರಿನಲ್ಲಿ ಪಶು ನಿರೀಕ್ಷಕನಾಗಿ ವೃತ್ತಿ ಜೀವನ ಆರಂಭಿಸಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿದೆ. ಅಲ್ಲಿಂದ ಮುಂಬಡ್ತಿ ಹೊಂದುವ ಮೂಲಕ ಅಕಾರಿಯಾಗಿ ಮಡಸೂರು-ಲಿಂಗದಹಳ್ಳಿ ಹಾಗೂ ತ್ಯಾಗರ್ತಿಯಲ್ಲಿ ಕತ್ಯವ್ಯ ನಿರ್ವಹಿಸಿದೆ. ಇಲ್ಲಿನ ಜನರ ಪ್ರೀತಿ, ವಿಶ್ವಾಸ ನನಗೆ ಇನ್ನೂ ಹೆಚ್ಚಿನ ಸೇವೆಗೆ ಅವಕಾಶ ಕಲ್ಪಿಸಿಕೊಟ್ಟಿದೆ ಎಂದು ಹೇಳಿದರು.
ನೀಚಡಿ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎನ್.ಪಿ.ಶ್ರೀಧರ ಮಾತನಾಡಿ, ಸಂಘವು ನಿರಂತರವಾಗಿ ಲಾಭ ಗಳಿಸಲು ಉತ್ಪಾದಕರ ಪರಿಶ್ರಮ ಕಾರಣ. ಈ ಬಾರಿ ಸಂಘವು 4.66 ಲಕ್ಷದಷ್ಟು ವ್ಯಾಪಾರದಲ್ಲಿ ಲಾಭ ಗಳಿಸಿದೆ. 54 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ ಎಂದರು.
ನೀಚಡಿ ಹಾಲು ಉತ್ಪಾದಕ ಸಂಘದ ಆಯವ್ಯಯದ ಕುರಿತು ಚರ್ಚೆ ನಡೆಸಲಾಯಿತು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ 25 ವರ್ಷ ಸೇವೆ ಸಲ್ಲಿಸಿ, ಇತ್ತೀಚಿಗೆ ನಿಧನರಾದ ಗಣಪತಿ ಗೋವಿಂದ ಹೆಗಡೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬದ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷೆ ಶ್ಯಾಮಲಾ ನಾರಾಯಣಮೂರ್ತಿ, ನಿರ್ದೇಶಕರಾದ ಗೋಪಾಲಕೃಷ್ಣ ಭಟ್, ಪ್ರಜ್ಞಾ ಪ್ರಕಾಶ, ಎಸ್.ಎಂ.ಶಿವಪ್ರಕಾಶ್, ಗಂಗಾಧರ, ಹರ್ಷ ಗೋಖಲೆ, ಪ್ರಶಾಂತ್ ಭಾಗವತ್ ಇತರರಿದ್ದರು.