ಪಶು ಪಕ್ಷಿಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ:ಡಿಸಿ ಸಿ.ಸತ್ಯಭಾಮಾ

ಪಶು ಪಕ್ಷಿಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ:ಡಿಸಿ ಸಿ.ಸತ್ಯಭಾಮಾ
Published on

ಹಾಸನ: ಪಶು ಪಕ್ಷಿಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಬೀಡಾಡಿ ಜಾನುವಾರುಗಳನ್ನು ಹಿಡಿದು ಗೋ ಶಾಲೆಗಳಿಗೆ ಬಿಡಲು ಅಧಿಕಾರಿಗಳು ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಸೂಚಿಸಿದರು.

ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಪ್ರಾಣಿದಯಾ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಸಾಯಿ ಖಾನೆಗಳ ಮೇಲೆ ನಿಗಾವಹಿಸಿ ಅನಧಿಕೃತವಾಗಿ ಜಾನುವಾರುಗಳನ್ನು ಕಳ್ಳ ಸಾಗಾಣಿಕೆ ಮಾಡುವುದರ ಬಗ್ಗೆ ನಿಗವಹಿಸಬೇಕು , ಈಗಾಗಲೆ ಎಫ್.ಐ.ಆರ್. ಆಗಿರುವ ಪ್ರಕರಣಗಳಲ್ಲಿ ಏನು ಕ್ರಮ ಜರುಗಿಸಲಾಗಿದೆ ಎಂಬುದರ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳು ಎಚ್ಚರವಹಿಸಬೇಕು ಎಂದರು.

ಬೀದಿ ನಾಯಿಗಳ ಸಂತಾನ ನಿಯಂತ್ರಣ ಯೋಜನೆಯನ್ನು ಕ್ರಮಬದ್ದವಾಗಿ ಅನುಷ್ಠಾನಗೊಳಿಸುವುದರಿಂದ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣವಾಗುವುದರ ಜೊತೆಗೆ ಸಾರ್ವಜನಿಕರಿಗೆ ಅವುಗಳಿಂದ ಉಂಟಾಗುವ ಉಪಟಳ, ನಾಯಿ ಕಡಿತ ಮತ್ತು ರೇಬಿಸ್ ರೋಗ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗೋ ಶಾಲೆಗಳಂತೆ ಶ್ವಾನ ಶಾಲೆ ತೆರೆಯಲು ಖಾಸಗಿ ಸಂಸ್ಥೆಗಳು ಮುಂದೆ ಬರಬೇಕು ಎಂದು ತಿಳಿಸಿದರು.

ಅರಸೀಕೆರೆ ತಾಲ್ಲೂಕಿನ ಬೋರನಕೊಪ್ಪಲು ಸರ್ಕಾರಿ ಗೋಶಾಲೆಯನ್ನು ಸರ್ಕಾರದ ನಿರ್ದೇಶನದಂತೆ ಖಾಸಗಿ ಸಹಬಾಗಿತ್ವದ ಸರ್ಕಾರಿ ಗೋಶಾಲೆಯನ್ನಾಗಿ ಸಾರ್ವಜನಿಕರು, ಸಂಘ ಸಂಸ್ಥೆಗಳಿಗೆ ವಹಿಸಿಕೊಡಲು ಮಾರ್ಗಸೂಚಿಗಳನ್ನು ಅನುಸರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಪಶು ವೈದ್ಯಕೀಯ ಕಾಲೇಜಿನ ಡೀನ್ ಡಾ.ಶಿವಕುಮಾರ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ರಮೇಶ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜವರೇಗೌಡ, ಜಿಲ್ಲಾ ಪ್ರಾಣಿದಯಾ ಸಂಘದ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net