

ಮೈಸೂರು: ಬೆಂಗಳೂರಿನ ವಿಮಾನ ನಿಲ್ದಾಣದ ಮುಂದೆ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಭವ್ಯ ಕಂಚಿನ ‘ಪ್ರಗತಿಯ ಪ್ರತಿಮೆ’ ಅನಾವರಣ ಸಂಬಂಧ ನಾಡಿನಾದ್ಯಂತ ಆರಂಭಗೊಂಡಿರುವ ಪವಿತ್ರ ಮೃತ್ತಿಕೆ (ಮಣ್ಣು) ಸಂಗ್ರಹದ ರಥ ಶನಿವಾರ ನಗರಕ್ಕೆ ಆಗಮಿಸಿತು.
ಬೆಂಗಳೂರು-ಮೈಸೂರು ಮುಖ್ಯ ರಸ್ತೆಯ ಮಣಿಪಾಲ್ ಆಸ್ಪತ್ರೆ ಮುಂಭಾಗದ ಕೆಂಪೇಗೌಡ ವೃತ್ತದಲ್ಲಿ ರಾಜ್ಯ ಒಕ್ಕಲಿಗರ ಸಂಘ, ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘ ಹಾಗೂ ಕೆಂಪೇಗೌಡ ಪ್ರತಿಮೆ ಅನಾವರಣ ಜಯಂತ್ಯುತ್ಸವ ಸಮಿತಿ, ಸಿದ್ಧಾರ್ಥನಗರ ಒಕ್ಕಲಿಗರ ಸಂಘ, ವಿಜಯನಗರ ಒಕ್ಕಲಿಗರ ಸಂಘ, ಒಕ್ಕಲಿಗರ ಯುವವೇದಿಕೆ ಸೇರಿ ಹಲವು ಒಕ್ಕಲಿಗರ ಸಂಘದ ಮುಖಂಡರು ಡೋಲು ನಗಾರಿ, ಕಂಸಾಳೆ, ವೀರಗಾಸೆ ತಂಡದೊಂದಿಗೆ ಮೆರವಣಿಗೆಯಲ್ಲಿ ರಥವನ್ನು ಸ್ವಾಗತಿಸಿದರು.
ಈ ವೇಳೆ ಶಾಸಕ ಜಿ.ಟಿ. ದೇವೇಗೌಡ ಅವರು ಕೆಂಪೇಗೌಡರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ವಾಹನ ಅರಮನೆಯ ಕೋಟೆ ಆಂಜನೇಯ ದೇವಾಲಯದ ಆವರಣ ತಲುಪಿತು. ಈ ವೇಳೆ ಚಾಮುಂಡಿಬೆಟ್ಟದ ಜಲ, ಮೈಸೂರು ಅರಮನೆ, ಕುವೆಂಪು ನಿವಾಸ ಹಾಗೂ ಎಚ್.ಕೆ.ರಾಮಯ್ಯ ಅವರ ಸಮಾಧಿ ಬಳಿಯಿಂದ ಮೃತ್ತಿಕೆ (ಮಣ್ಣು) ಸಂಗ್ರಹಿಸಿ ತರಲಾಗಿತ್ತು. ರಥ ಹದಿನೈದು ದಿನಗಳ ಕಾಲ ಜಿಲ್ಲೆಯ ವಿವಿಧ ತಾಲೂಕುಗಳಿಗೆ ರಥ ಸಂಚರಿಸಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಆದಿಚುಂಚನಗಿರಿ ಶಾಖಾ ಮಠದ ಶ್ರೀಸೋಮೇಶ್ವರನಾಥ ಸ್ವಾಮೀಜಿ, ಕಾಗಿನೆಲೆ ಮಠ ಶ್ರೀಶಿವಾನಂದಪುರಿ ಸ್ವಾಮೀಜಿ, ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ, ಮೇಯರ್ ಶಿವಕುಮಾರ್, ಮಾಜಿ ಶಾಸಕ ವಾಸು, ಕಾಂಗ್ರೆಸ್ ಮುಖಂಡ ಹರೀಶ್‌ಗೌಡ, ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಗಂಗಾಧರ್, ಗೌರವಾಧ್ಯಕ್ಷ ಕೆ.ವಿ.ಶ್ರೀಧರ್, ನಿರ್ದೇಶಕ ಮಂಜೇಗೌಡ, ನಗರಪಾಲಿಕೆ ಸದಸ್ಯರಾದ ಪುಷ್ಪಲತಾ ಜಗನ್ನಾಥ್, ಅಶ್ವಿನಿ ಅನಂತು, ಗೀತಾ ಯೋಗಾನಂದ, ವಿದ್ಯಾವಿಕಾಸ ಕಾಲೇಜಿನ ಕಾರ್ಯದರ್ಶಿ ಕವೀಶ್‌ಗೌಡ, ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಆರ್.ಜಯರಾಂ, ಅಧ್ಯಕ್ಷ ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಎಂ.ಈ.ಚೇತನ್, ಉಪಾಧ್ಯಕ್ಷರಾದ ರವಿರಾಜಕೀಯ, ಬಿ.ಸಿ.ಮಹೇಶ್, ಖಜಾಂಚಿ ಆರ್.ಲೋಕೇಶ್, ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್‌ಗೌಡ, ವಿಕ್ರಾಂತ್ ಪಿ.ದೇವೇಗೌಡ ಇತರರು ಇದ್ದರು.