

ಚಾಮರಾಜನಗರ: ಮಹಿಳೆಯರು ಕೇವಲ ಮನೆಗೆಲಸಕ್ಕೆ ಸೀಮಿತವಾಗದೇ ಕೃಷಿಯತ್ತ ಮುಖ ಮಾಡುತ್ತಿರುವುದು ಉತ್ತಮ ಬೆಳವಣಿಗೆ. ಇದರಿಂದ ಕೃಷಿ ಅಭಿವೃದ್ಧಿಗೆ ಸಹಕಾರಿ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಗೌಡೇಗೌಡ ತಿಳಿಸಿದರು.
ಹನೂರು ತಾಲೂಕಿನ ರಾಮಾಪುರ ಹೋಬಳಿಯ ಪಳನಿಮೇಡು (ಮಾಮರದೊಡ್ಡಿ) ಗ್ರಾಮದಲ್ಲಿ ಮಹಿಳಾ ರೈತ ಸಂಘದ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದರು. ಕೃಷಿ ದೇಶದ ಬೆನ್ನೆಲುಬು. ಆಗಾಗಿ ರೈತರು ಜನರಿಗೆ ಅನ್ನದಾತರಾಗಿದ್ದಾರೆ. ಆದರೆ ಏಳುಬೀಳಿನ ನಡುವೆಯೂ ಶ್ರಮವಹಿಸಿ ಕೃಷಿ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಕೃಷಿಯ ಬಗ್ಗೆ ಒಲವು ತೋರುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಇದರಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಹಾಗೂ ಸ್ವಾವಲಂಬನೆ ಜೀವನ ನಡೆಸಲು ಸಹಕಾರಿಯಾಗಲಿದೆ. ಇದಕ್ಕೆ ಪೂರಕವಾಗಿ ಮಾಮರದೊಡ್ಡಿ ಗ್ರಾಮದಲ್ಲಿ 21 ಮಹಿಳೆಯರು ರೈತ ಸಂಘ ಸ್ಥಾಪಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಈ ದಿಸೆಯಲ್ಲಿ ಸಂಘದ ಅಭಿವೃದ್ಧಿ ಸದಾ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಗಮನಹರಿಸಬೇಕು ಎಂದು ಮಹಿಳೆಯರು ರೈತ ಸಂಘಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಬಸವಣ್ಣ, ಗೌರವಾಧ್ಯಕ್ಷ ಶಿವರಾಮಣ್ಣ, ಕೊಳ್ಳೇಗಾಲ ಸಂಘದ ಕಾರ್ಯದರ್ಶಿ ರವಿನಾಯ್ಕ, ಸದಸ್ಯರಾದ ಅಮ್ಜಾದ್‌ಖಾನ್, ಬಸವರಾಜು, ಪಳನಿಮೇಡು ಮಹಿಳಾ ರೈತ ಸಂಘದ ಅಧ್ಯಕ್ಷೆ ಕನಕ, ಕಾರ್ಯದರ್ಶಿಗಳಾದ ರಾಜು, ಕೃಷ್ಣಮೂರ್ತಿ ಹಾಗೂ ಇನ್ನಿತರರು ಇದ್ದರು.