

ರಾಮನಗರ : ರೈತರ ವಶದಲ್ಲಿದ್ದ ಜಮೀನನ್ನು ಪೊಲೀಸ್ ಬಲ ಪ್ರಯೋಗಿಸಿ ರಾಜೀವ್‌ಗಾಂಧಿ ವಿಶ್ವವಿದ್ಯಾಲಯ ಕಾಮಗಾರಿ ನಡೆಸಲು ಮುಂದಾಗಿರುವ ಗುತ್ತಿಗೆದಾರರುಜಮೀನಿನಲ್ಲಿ ಬೆಳೆದಿದ್ದ ಮರಗಳನ್ನು ಏಕಾಏಕಿ ಯಂತ್ರಗಳಿಂದ ನಾಶಪಡಿಸಿದ್ದಾರೆ ಎಂದು ರೈತರು ದೂರಿದ್ದಾರೆ.
ಅರ್ಚಕರಹಳ್ಳಿಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಿದ್ದ ಭೂಮಿಯಲ್ಲಿ ರೈತರು ತೆಂಗು, ಅಡಕೆ ಮುಂತಾದ ಬೆಳೆ ಬೆಳೆದಿದ್ದರು. ಜಮೀನಿಗೆ ನೀಡಿರುವ ಪರಿಹಾರ ಯಾವುದಕ್ಕೂ ಸಾಲದು, ನ್ಯಾಯಯುತ ಪರಿಹಾರ ಸಿಗದೆ ಅನ್ಯಾಯವಾಗಿದೆ ಎಂದು ರೈತ ಜಯದೇವಯ್ಯ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಹಾಗಿದ್ದರೂ ಶನಿವಾರ, ರೈತರ 4.17 ಗುಂಟೆ ಜಮೀನಿನಲ್ಲಿದ್ದ ಗಿಡ ಮರಗಳನ್ನು ಗುತ್ತಿಗೆದಾರರು ಪೊಲೀಸರ ಬಲ ಪ್ರಯೋಗಿಸಿ ರೈತರ ಎದುರಲ್ಲೇ ತೆರವು ಮಾಡಿದ ಘಟನೆ ನಡೆಯಿತು. ತೆರವು ಕಾರ್ಯಾಚರಣೆ ನಿಲ್ಲಿಸಿ, ನಮಗೆ ಅನ್ಯಾಯವಾಗಿದೆ. ನಮಗೆ ನ್ಯಾಯಬೇಕು ಎಂದು ನೆಲಕ್ಕುರುಳುತ್ತಿದ್ದ ಮರಗಳನ್ನು ನೋಡಿ ಭೂ ಮಾಲೀಕರಾದ ರಾಜಶೇಖರಯ್ಯ, ಸುರೇಶ್, ನಿರಂಜನ್, ಜಯದೇವಯ್ಯ ಸೇರಿ ಅನೇಕರು ಕಣ್ಣೀರಿಟ್ಟು ಗೋಳಾಡಿದರು.
ಇದಕ್ಕೂ ಮೊದಲು, ಪೊಲೀಸರೊಂದಿಗೆ ರೈತರು ಮಾತಿನ ಚಕಮಕಿ ನಡೆಸಿದರು. ಹೆಚ್ಚಿನ ಪೊಲೀಸರಿದ್ದ ಕಾರಣ ರೈತರನ್ನು ಜಿಲ್ಲಾಧಿಕಾರಿಗಳ ಬಳಿಗೆ ಕರೆದೊಯ್ಯುವ ನೆಪ ಹೇಳಿ ಪೊಲೀಸರು ವಾಹನದಲ್ಲಿ ಕರೆದೊಯ್ದರು.
ಇತ್ತ, ಗುತ್ತಿಗೆದಾರ ಜಯದೇವಯ್ಯ, ರಾಜಶೇಖರಯ್ಯ ಅವರ 4.17 ಎಕರೆ ಜಮೀನಿನಲ್ಲಿ ಬೆಳೆದಿದ್ದ ತೆಂಗು, ಅಡಕೆ, ತೇಗದ ನೂರಾರು ಮರಗಳನ್ನು ಐದಾರು ಜೆಸಿಬಿ, ಮೂರ‌್ನಾಲ್ಕು ಹಿಟಾಚಿ ಯಂತ್ರಗಳ ಮುಖಾಂತರ ನೆಲಕ್ಕುರುಳಿಸಿದರು. ನಂತರ ಪೊಲೀಸರು ಜಮೀನು ಮಾಲೀಕರನ್ನು ಬಿಟ್ಟರು. ಬಳಿಕ ಜಮೀನಿಗೆ ಆಗಮಿಸಿದ ರೈತರು ನೆಲಕಚ್ಚಿದ ಮರಗಳನ್ನು ಕಂಡು ದುಃಖಿಸಿದರು.
ಪೊಲೀಸರಿಂದ ಸೌರ್ಜನ್ಯ: ಪೊಲೀಸರು ನಮ್ಮ ಮೇಲೆ ದೌರ್ಜನ್ಯ ಎಸಗಿ ಜಮೀನಿನಲ್ಲಿ ಬೆಳೆದಿದ್ದ ನೂರಾರು ಮರಗಳನ್ನು ತೆರವುಗೊಳಿಸಲು ಅವರ ಪರವಾಗಿ ಸಹಕಾರ ನೀಡಿದ್ದಾರೆ. ಸುಪ್ರೀಂ ಕೊರ್ಟ್‌ನಲ್ಲಿ ಪರಿಹಾರ ಸಾಲುತ್ತಿಲ್ಲ ಎಂದು ದಾವೆ ಹೂಡಿದ್ದೇವೆ. ಕೇಸಿನ ದಾಖಲಾತಿ ತೋರಿಸಿ ಕೇಳಿಕೊಂಡರೂ ನಮ್ಮನ್ನು ಬಿಡದೆ, ಇಂದು ಎರಡನೇ ಶನಿವಾರ ರಜೆ ಇದ್ದರೂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಲ್ಲದಿದ್ದರೂ ನಮ್ಮನ್ನು ಡಿಸಿ ಕರೆಯುತ್ತಿದ್ದಾರೆ ಬನ್ನಿ ಎಂದು ಕರೆದೊಯ್ದು ಜಮೀನಿನಲ್ಲಿ ಮರ ನಾಶಪಡಿಸಲು ಕಾರಣರಾಗಿದ್ದಾರೆ ಎಂದು ರೈತ ಜಯದೇವಯ್ಯ ದುಃಖ ತೋಡಿಕೊಂಡರು.
ಮರಗಳು ಇರುವ ಜಮೀನಿನಲ್ಲಿ ಕಾಮಗಾರಿ ನಡೆಸದಂತೆ ಗುತ್ತಿಗೆದಾರನಿಗೆ ಶಾಸಕ ಇಕ್ಬಾಲ್ ಹುಸೇನ್ ಹಾಗೂ ಜಿಲ್ಲಾಧಿಕಾರಿ ಯಶವಂತ್ ಸೂಚನೆ ನೀಡಿದ್ದರು. ಅಲ್ಲದೆ, ಸೋಮವಾರ ಸ್ಥಳ ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದರು. ಆದರೆ, 2ನೇ ಶನಿವಾರ ಸರ್ಕಾರಿ ರಜೆಯಾದ ಕಾರಣ ತೆರವು ಕಾರ್ಯಾಚರಣೆ ಮಾಡಿದ್ದಾರೆ ಎಂದು ರೈತ ನಿರಂಜನ್ ಆರೋಪಿಸಿದರು.
ನಾವು ಕಾನೂನು ಪರವಾಗಿಯೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಜಮೀನು ತೆರವು ಮಾಡಿದ್ದೇವೆ. ರೈತರಲ್ಲಿ ಕೋರ್ಟ್‌ಗೆ ಹೋಗಿರುವ ಸ್ಟೇ ಇದ್ದರೆ ಕೊಡಿ ಎಂದು ಕೇಳಿದ್ದೇವೆ. ಅವರು ಯಾವುದೇ ದಾಖಲಾತಿ ನೀಡಿಲ್ಲ. ನಾವು ಕಾನೂನು ಮೀರಿ ತೆರವು ಕಾರ್ಯಾಚರಣೆ ನಡೆಸಿಲ್ಲ. ಪೊಲೀಸರ ಸಮ್ಮುಖದಲ್ಲೇ ತೆರವು ಮಾಡಿದ್ದೇವೆ.ಹೆಸರು ಹೇಳಲು ಇಚ್ಛಿಸದ ಗುತ್ತಿಗೆದಾರ ಕಂಪನಿ ಅಧಿಕಾರಿ
.