

ಹನೂರು: ಪರಿಸರ ಜೀವ ಸಂಕುಲದ ಸಂಪತ್ತು. ಆದ್ದರಿಂದ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಮಲೆಮಹದೇಶ್ವರ ವನ್ಯಜೀವಿ ವಿಭಾಗದ ಎಸಿಎಫ್ ಚಂದ್ರಶೇಖರ ಪಾಟೀಲ್ ತಿಳಿಸಿದರು.
ತಾಲೂಕಿನ ಅಜ್ಜೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಅರಣ್ಯ, ಶಿಕ್ಷಣ ಇಲಾಖೆ ಹಾಗೂ ಹೋಲಿಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ಧ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಪರಿಸರ ನೈರ್ಮಲ್ಯಕ್ಕೆ ಕಾರಣವಾಗಿದ್ದು, ವಾತವರಣದಲ್ಲಿ ವೈಪರೀತ್ಯವಾಗುತ್ತಿದೆ. ಆದ್ದರಿಂದ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಬೇಕು. ಈ ಬಗ್ಗೆ ಪಾಲಕರಿಗೆ ಅರಿವು ಮೂಢಿಸಬೇಕು. ಜತೆಗೆ ಪ್ರತಿಯೊಬ್ಬರೂ ಮನೆಯ ಮುಂಭಾಗ ಗಿಡಗಳನ್ನು ನೆಟ್ಟು ಬೆಳೆಸಬೇಕು. ಇದರಿಂದ ಉತ್ತಮ ವಾತವರಣ ನಿರ್ಮಾಣ ಆಗುವುದರ ಜತೆಗೆ ಪರಿಸರ ಸಂರಕ್ಷಣೆಗೆ ಸಹಕಾರ ನೀಡಿದಂತಾಗುತ್ತದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಹೊಂದಲು ಸಹಕರಿ ಆಗುತ್ತದೆ ಎಂದು ತಿಳಿಸಿದರು.
ಬಳಿಕ ವಿದ್ಯಾರ್ಥಿಗಳು ಮುಖ್ಯ ರಸ್ತೆಯಲ್ಲಿ ಪರಿಸರದ ಮಹತ್ವದ ಬಗ್ಗೆ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಆರ್‌ಎಫ್‌ಒ ಪ್ರವೀಣ್, ಮುಖ್ಯ ಶಿಕ್ಷಕಿ ಮೇರಿ, ಜೆಎಸ್‌ಎಸ್ ಪ್ರೌಢಶಾಲೆಯ ಶಿಕ್ಷಕರಾದ ಸ್ವಾಮಿ, ವೆಂಕಟರಾಜು, ಕೊಳಂದೈರಾಜು, ದೊರೆಸ್ವಾಮಿ, ಕಲ್ಪನಾ, ಮಹದೇವಮ್ಮ. ಮಂಗಳಮ್ಮ, ರಮ್ಯ, ಹೋಲಿ ಕ್ರಾಸ್ ಸಂಸ್ಥೆಯ ಬಸವರಾಜು, ಸುರೇಶ್, ಮುಖಂಡ ಲೋಕೇಶ್ ಇತರರಿದ್ದರು.