ಪರ್ಯಾಯ ಬೆಳೆಗಳತ್ತ ಗಮನ ಹರಿಸಿ

22.. PYP. 03
Published on

ಪಿರಿಯಾಪಟ್ಟಣ: ತಂಬಾಕು ಬೆಳೆಗಾರರು ಹಂತ-ಹಂತವಾಗಿ ಪರ್ಯಾಯ ವಾಣಿಜ್ಯ ಬೆಳೆಗಳತ್ತ ಗಮನ ಹರಿಸಬೇಕು ಎಂದು ರಾಜ್ಯ ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಸಲಹೆ ನೀಡಿದರು.


ಟೋಬಾಕೊ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ವತಿಯಿಂದ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 23ನೇ ಟೋಬಾಕೊ ಫಾರ್ಮರ್ಸ್ ಅವಾರ್ಡ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ ತಂಬಾಕು ಬೆಳೆಯುವುದನ್ನು ಪ್ರಾರಂಭಿಸಿ ಸುಮಾರು 50 ವರ್ಷಗಳೇ ಕಳೆದಿವೆ. ತಂಬಾಕು ಬೆಳೆಗಾರರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲು ಅವರ ಪರಿಶ್ರಮದ ದುಡಿಮೆಯೇ ಕಾರಣವಾಗಿದೆ ಎಂದರು.


ಹಗಲಿರುಳೆನ್ನದೆ ಮನೆ ಮಂದಿಯಲ್ಲ ತಂಬಾಕು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದರಿಂದಾಗಿ ಅವರ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ತಂಬಾಕು ಬೆಳೆಗಾರರು ವರ್ಷವಿಡೀ ಶ್ರಮಪಟ್ಟು ಬೆಳೆದ ತಂಬಾಕು ಬೆಳೆ ಮಾರಾಟದ ವೇಳೆ ಖರೀದಿದಾರ ಕಂಪನಿಗಳು ದರ ನೀಡುವ ವಿಷಯದಲ್ಲಿ ಸಂಪೂರ್ಣ ಹಿಡಿತ ಹೊಂದಿರುವುದು ಬೇಸರದ ವಿಷಯ. ಬೆಳೆಗಾರರು ಅತಿ ಹೆಚ್ಚು ತಂಬಾಕು ಉತ್ಪಾದನೆ ಮಾಡದೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ತಂಬಾಕು ಉತ್ಪಾದನೆ ಮಾಡಿದಲ್ಲಿ ಉತ್ತಮ ದರ ಪಡೆಯಬಹುದು. ತಂಬಾಕಿಗೆ ಪರ್ಯಾಯ ವಾಣಿಜ್ಯ ಬೆಳೆಯಾಗಿ ರೇಷ್ಮೆ ಬೆಳೆಯನ್ನು ಆಯ್ದುಕೊಂಡಲ್ಲಿ ಉತ್ತಮ ಲಾಭ ನಿರೀಕ್ಷಿಸಬಹುದು ಎಂದರು.


ತಂಬಾಕು ಮಾರಾಟದ ಸಂದರ್ಭದಲ್ಲಿ ತಂಬಾಕು ಮಂಡಳಿಯು ಬೆಳೆಗಾರರ ಪರ ನಿಲ್ಲಲಾಗದೆ ತನ್ನ ಅಸಹಾಯಕತೆ ಪ್ರದರ್ಶಿಸಿದೆ. ತಂಬಾಕು ಬೆಳೆಯಲು ಪ್ರೋತ್ಸಾಹಿಸುವ ಕಂಪನಿಗಳು ಕೊಳ್ಳುವಾಗಲೂ ಅದೇ ರೀತಿ ಉತ್ತಮ ದರ ನೀಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಐಟಿಸಿ, ಜಿಪಿಐ ಮತ್ತಿತರ ಕಂಪನಿಗಳು ತಂಬಾಕು ಬೆಳೆಯಿಂದಲೇ ಉತ್ತಮ ವಹಿವಾಟು ನಡೆಸುವ ಮೂಲಕ ದೊಡ್ಡ ಉದ್ಯಮವಾಗಿ ಬೆಳೆದಿವೆ. ವಾರ್ಷಿಕವಾಗಿ 4,535 ಕೋಟಿ ರೂ.ಗಳ ತಂಬಾಕನ್ನು ರಫ್ತು ಮಾಡುತ್ತಿರುವ ಕಂಪೆನಿಗಳ ಶೇ.2ರಷ್ಟು ಸಿಎಸ್‌ಆರ್ ಫಂಡ್ ತಂಬಾಕು ಬೆಳೆಗಾರರ ಕುಟುಂಬಗಳ ಶ್ರೇಯೋಭಿವೃದ್ಧಿಗೆ ಉಪಯೋಗವಾಗಬೇಕು. ಈ ನಿಟ್ಟಿನಲ್ಲಿ ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ತಂಬಾಕು ಬೆಳೆಗಾರರ ಕುಟುಂಬಗಳಿಗಾಗಿಯೇ ಒಂದು ಹೈಟೆಕ್ ಆರೋಗ್ಯ ಚಿಕಿತ್ಸಾ ಕೇಂದ್ರ ತೆರೆಯಲು ಕಂಪನಿಗಳು ಮುಂದಾಗಬೇಕು ಎಂದುತಿಳಿಸಿದರು.


ಸಿಟಿಆರ್‌ಐ(ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ) ಮುಖ್ಯಸ್ಥ ಡಾ.ರಾಮಕೃಷ್ಣ ಮಾತನಾಡಿದರು. ಸಮಾರಂಭದಲ್ಲಿ ತಂಬಾಕು ಕೃಷಿಯಲ್ಲಿ ಸಾಧನೆ ಮಾಡಿದ 10 ತಂಬಾಕು ಬೆಳೆಗಾರರನ್ನು ಸನ್ಮಾನಿಸಲಾಯಿತು.


ಅರಕಲಗೂಡಿನ ಶಾಸಕ ಎ.ಮಂಜು, ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಕೆ.ಆರ್.ನಗರದ ಶಾಸಕ ಡಿ.ರವಿಶಂಕರ್, ಟೋಬಾಕೊ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ನಿರ್ದೇಶಕ ಶರತ್ ಟಂಡಣ್, ತಂಬಾಕು ಮಂಡಳಿ ಸದಸ್ಯರಾದ ಜಿ.ಸಿ.ವಿಕ್ರಂ ರಾಜ್, ಎಚ್.ಆರ್.ದಿನೇಶ್, ಮಾಜಿ ಉಪಾಧ್ಯಕ್ಷ ಬಿ.ವಿ.ಜವರೇಗೌಡ, ಪ್ರಭಾರ ಪ್ರಾದೇಶಿಕ ವ್ಯವಸ್ಥಾಪಕ ಡಾ.ಬ್ರಿಜ್‌ಭೂಷಣ್, ಐಟಿಸಿ ಕಂಪನಿ ಉಪಾಧ್ಯಕ್ಷ ಕೃಷ್ಣಕುಮಾರ್, ಜಿಪಿಐ ಕಂಪನಿಯ ಲೀಫ್ ಮ್ಯಾನೇಜರ್ ಜಿತೇಂದ್ರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net