ಪರೋಪಕಾರದಿಂದ ಜೀವನ ಸಾಗಿಸಿ

Live philanthropically
ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನಡೆಯುತ್ತಿರುವ ಪ್ರವಚನ ಕಾರ್ಯಕ್ರಮದಲ್ಲಿ ತಾಳಿಕೋಟೆ ಖಾಸ್ಗತೇಶ್ವರ ಬೃಹನ್ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ಆಶೀರ್ವಚನ ನೀಡಿದರು.
Published on

ಬಬಲೇಶ್ವರ: ಆಸೆಯೇ ದುಖಕ್ಕೆ ಮೂಲ. ಮನುಷ್ಯನಾಗಿ ಜನ್ಮ ತಾಳಿದ ಮೇಲೆ ಮಾನವೀಯದ ಪ್ರತೀಕದಂತೆ ಪರೋಪಕಾರದಿಂದ ಬಾಳ್ವೆ ಮಾಡಿದರೆ ಬದುಕು ಸಾರ್ಥಕವಾಗುತ್ತದೆ ಎಂದು ತಾಳಿಕೋಟೆ ಖಾಸ್ಗತೇಶ್ವರ ಬೃಹನ್ಮಠದ ಬಾಲ ಶಿವಯೋಗಿ ಸಿದ್ದಲಿಂಗ ದೇವರು ಹೇಳಿದರು.

ಬುಧವಾರ ರಾತ್ರಿ ತಾಲೂಕಿನ ಕಾರಜೋಳ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗಳು ಆಶೀರ್ವಚನ ನೀಡಿ, ಹುಟ್ಟುವಾಗ ಏನನ್ನೂ ಹೊತ್ತುಕೊಂಡು ಬರುವುದಿಲ್ಲ. ಅದೇ ರೀತಿ ಸತ್ತಾಗಲೂ ಭುವಿಯಿಂದ ಏನನ್ನೂ ತೆಗೆದುಕೊಂಡು ಹೋಗುವುದಿಲ್ಲ. ಹೀಗಿದ್ದ ಮೇಲೆ ಅತಿ ವ್ಯಾಮೋಹ ಏಕೆ ಮಾಡಬೇಕು? ಆಸ್ತಿಯನ್ನು ಕೂಡಿಟ್ಟು, ಅದನ್ನು ನಾವೇ ಬಳಸದಿದ್ದರೇ ನಮ್ಮವರಿಗೆ ಎಂದು ಬಿಟ್ಟುಹೋಗುವುದರಲ್ಲಿ ಏನು ಅರ್ಥವಿದೆ. ಪ್ರತಿಯೊಬ್ಬರು ದೇವರು ಕೊಟ್ಟಿದ್ದನು ಬಚ್ಚಿಡದೆ ಅದನ್ನು ದಾನದ ಮೂಲಕ ಬಿಚ್ಚಿಟ್ಟು ನೆಮ್ಮದಿ ಹಾಗೂ ಸಾರ್ಥಕ ಜೀವನವನ್ನು ಮಾಡಬೇಕು ಎಂದು ಮಾರ್ಮಿಕವಾಗಿ ನುಡಿದರು.

ನಮ್ಮ ಜನ್ಮಕ್ಕೆ ಕಾರಣರಾದ ತಾಯಿ-ತಂದೆಯ ಋಣ ತೀರಿಸಲು ಸಾಧ್ಯವಿಲ್ಲ. ಅಂತಹ ದೇವರನ್ನು ನಾವು ಅವರ ಮುಪ್ಪಿನಲ್ಲಿ ನೋಡಿಕೊಳ್ಳುವ ಮೂಲಕ ಕಾಳಜಿ ವಹಿಸಿದರೆ ನಿಮ್ಮ ಜನ್ಮ ಸಾರ್ಥಕವಾಗುತ್ತದೆ ಎಂದ ಬಾಲ ಶಿವಯೋಗಿಗಳು, ಈ ರೀತಿಯ ಪ್ರವಚನ ಕಾರ್ಯಕ್ರಮಗಳಿಂದ ಮನಸ್ಸು ಪರಿವರ್ತಿತವಾಗುವುದಲ್ಲದೇ ಜೀವನದ ಔನ್ನತ್ಯ ಅರ್ಥವಾಗುತ್ತದೆ ಎಂದು ಹೇಳಿದರು.

ಪ್ರವಚನ ಪ್ರವೀಣ ಶಿಗ್ಗಾಂವಿಯ ಶಂಕರಯ್ಯ ಶಾಸ್ತ್ರಿಗಳು ವೇದಿಕೆಯಲ್ಲಿದ್ದರು. ಗ್ರಾಮದ ಗಣ್ಯರು, ನೂರಾರು ಗ್ರಾಮಸ್ಥರು, ಮಲ್ಲಿಕಾರ್ಜುನ ಸೇವಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ನಂತರ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net