ಪರೋಪಕಾರ ಗುಣ ತರಲಿದೆ ಶಕ್ತಿ

Shravana
Published on

ಚಿತ್ರದುರ್ಗ: ಸಂಪತ್ತಿನಿಂದ ಶ್ರೇಷ್ಠರಾಗಲೂ ಸಾಧ್ಯವಿಲ್ಲ. ಅದನ್ನು ಪರೋಪಕಾರಕ್ಕೆ ಬಳಸಿದಾಗ ವ್ಯಕ್ತಿ ಶಕ್ತಿಯಾಗಿ ಬೆಳೆಯಲು ಸಾಧ್ಯ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.


ಶಿವ ಬಡಾವಣೆಯ ಎಸ್.ವಿ.ಸ್ಮಿತಾ ಅವರ ಮನೆಯಂಗಳದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ನಿತ್ಯ ಕಲ್ಯಾಣ ಮನೆ-ಮನೆಗೆ ಚಿಂತನ ಕಾರ್ಯಕ್ರಮದ ನೇತೃತ್ವವಹಿಸಿ ಮಾತನಾಡಿದರು.


ಅಧ್ಯಾತ್ಮ ಮನಸ್ಸನ್ನು ವಿಶಾಲಗೊಳಿಸುತ್ತದೆ. ಬಸವತತ್ವ ಕೂಡ ಇದನ್ನೇ ಸಾರುತ್ತಿದೆ. ವಿಶಾಲತೆ ಇರುವೆಡೆ ಸ್ವರ್ಗ ಸೃಷ್ಟಿಗೆ ಕಾರಣವಾಗಲಿದೆ. ಆದರೆ, ಸಂಕುಚಿತ ಮನೋಭಾವ ದುಃಖ ತಂದುಕೊಡುತ್ತದೆ ಎಂದರು.


ಬಸವಣ್ಣ ಒಂದೇ ಕಾಲಘಟ್ಟದಲ್ಲಿ ಅನೇಕ ಸಮಾಜಮುಖಿ ಕಾರ್ಯ ನಡೆಸಿದ ಧೀಮಂತ. ಶರಣ ಸಂಕುಲ ಒಂದೆಡೆ ಸೇರಿಸಿ, ಅದರ ಮೂಲಕ ಕಾಯಕ ಪ್ರಧಾನ ಸಮಾಜ ನಿರ್ಮಾಣ, ಅನುಭವ ಮಂಟಪ ರಚನೆ, ಸ್ಪಶ್ಯ-ಅಸ್ಪಶ್ಯ ಭಾವನೆಯ ನಿರ್ಮೂಲನೆ, ಸಾಮಾಜಿಕ ಸಮಾನತೆ, ವಚನ ರಚನೆಗೆ ಪ್ರೇರಣೆ, ಶಿವಯೋಗದ ಪರಿಕಲ್ಪನೆ, ಅಂಧಶ್ರದ್ಧೆಯ ಮೂಲೋತ್ಪಾಟನೆಯಂಥ ಕಾರ್ಯಗಳು ಸಾಕಾರಗೊಳ್ಳಲು ವಿಶಾಲ ದೃಷ್ಟಿಯುಳ್ಳವರಿಂದ ಮಾತ್ರ ಸಾಧ್ಯ ಎಂದು ಹೇಳಿದರು.


ಸೋಮವಾರಪೇಟೆ ವಿರಕ್ತಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ವಚನಗಳನ್ನು ಅರ್ಥೈಸಿಕೊಂಡು ಅಳವಡಿಸಿಕೊಂಡರೆ ಬದುಕು ವಿಶಾಲವಾಗುತ್ತದೆ ಎಂದರು.


ಉಪನ್ಯಾಸಕಿ ಡಾ.ಎನ್.ಮಮತಾ, ಎಸ್.ವಿ.ಸ್ಮಿತಾ, ಬಸವರಾಜ್, ವೀಣಾ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net