ಪರೋಪಕಾರ ಕೆಲಸಗಳಿಂದ ಪುಣ್ಯ ಪ್ರಾಪ್ತಿ

18ATHANIGRAMIN1
Published on

ಅಥಣಿ ಗ್ರಾಮೀಣ: ಗುರುವಿನ ಸೇವೆ, ದಾನ, ಧರ್ಮ, ಸತ್ಸಂಗದಲ್ಲಿ ಪಾಲ್ಗೊಳ್ಳುವುದರಿಂದ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಎದುರಿಸಬಹುದು ಎಂದು ಇಂಚಗೇರಿಯ ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.

ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಭೂಕೈಲಾಸ ಮಂದಿರದಲ್ಲಿ ಅವಜೀಕರ ಮಹಾರಾಜರ ೨೬ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ವಿಮಲಬ್ರಹ್ಮ ನಿರೂಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಸಾರವೆಂಬುದು ಗುರುಸ್ಮರಣೆ, ಪರೋಪಕಾರ ಮಾಡಿ ಪುಣ್ಯ ಪ್ರಾಪ್ತಿಮಾಡಿಕೊಳ್ಳುವುದಾಗಿದೆ. ಒಳ್ಳೆಯ ಮಾತುಗಳನ್ನು ಕೇಳಿ ಜ್ಞಾನ ಸಂಪಾದನೆ ಮಾಡಿಕೊಳ್ಳುವುದಾಗಿದೆ. ಲೋಹಗಳಿಂದ ಸಿರಿವಂತ ಎನ್ನಿಸಿಕೊಳ್ಳುವದಕ್ಕಿಂತ, ಜ್ಞಾನ ಪಡೆದು ಬಡವ ಎನಿಸಿಕೊಂಡರು ಚಿಂತೆ ಮಾಡಬಾರದು ಎಂದರು.

ಯುವಮುಖಂಡ ಚಿದಾನಂದ ಸವದಿ ಮಾತನಾಡಿ, ಗುರು, ತಂದೆ, ತಾಯಿ ಋಣ ತೀರಿಸುವುದು ಅಸಾಧ್ಯ. ಮಹಾದೇವ ಮಹಾರಾಜರು ಬಡಮಕ್ಕಳಿಗೆ ಶಿಕ್ಷಣ, ಕಲ್ಯಾಣ ಮಂಟಪ, ಉದ್ಯಾನವನ ನಿರ್ಮಿಸಿ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.

ಸದ್ಗುರುಗಳಿಂದ ಅವಜೀಕರ ಮಹಾರಾಜರ ಶಿಕ್ಷಣ ಸಂಸ್ಥೆಯ ಪಂಚ ಕೊಠಡಿಗಳ ಅಡಿಗಲ್ಲು ಪೂಜೆ ನೆರವೇರಿಸಿದರು. ಅಪ್ಪಾಸಾಹೇಬ ಅಡಹಳ್ಳಿ ದಾಸಬೋಧ ವಾಚಿಸಿದರು. ಶೇಗುಣಸಿಯ ಹನುಮಂತ ಮಹಾರಾಜರು, ಮಂಜುನಾಥ ಮಹಾರಾಜರು ಆಶೀರ್ವಚನ ನೀಡಿದರು.

ಭೂಕೈಲಾಸಮಂದಿರ ಪೀಠಾಧ್ಯಕ್ಷ ಮಹಾದೇವ ಮಹಾರಾಜರು, ಅಡವಯ್ಯ ಸ್ವಾಮೀಜಿ, ಪ್ರಕಾಶ ಮಹಾರಾಜರು, ಬಾಳು ಶರಣರು, ಶ್ರೀಶೈಲ ನಾರಗೊಂಡ, ಪುಷ್ಪಕುಮಾರ ಪಾಟೀಲ, ಬಸಪ್ಪ ಗುಮಟಿ, ರಾಜಶೇಖರ ಟೋಪಗಿ, ರಾಜಕುಮಾರ ಅಡಹಳ್ಳಿ, ಸುರೇಶ ಇಚೇರಿ, ರಾವಸಾಹೇಬ ಪಾಟೀಲ, ಗ್ರಾಪಂ ಅಧ್ಯಕ್ಷ ಶ್ರೀಶೈಲ ಕಾಂಬಳೆ, ಮುತ್ತಪ್ಪ ಸಂತಿ, ಮಲ್ಲಿಕಾರ್ಜುನ ಪಡಂದರ ಇತರರಿದ್ದರು. ಗುರುಸ್ವಾಮಿ ಶೇಗುಣಸಿ ನಿರೂಪಿಸಿದರು. ಆನಂದ ಕುಲಕರ್ಣಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net