

ವಿಜಯವಾಣಿ ಸುದ್ದಿಜಾಲ ಕಾರವಾರ
ಹೊನ್ನಾವರದಲ್ಲಿ 2017ರಲ್ಲಿ ನಡೆದ ಪರೇಶ ಮೇಸ್ತ ಎಂಬ ಮೀನುಗಾರ ಯುವಕನ ಅನುಮಾನಾಸ್ಪದ ಸಾವಿನ ಪ್ರಕರಣದ ಮರು ತನಿಖೆ ನಡೆಸಬೇಕು ಎಂದು ಕೋರಿ ಮೃತನ ತಂದೆ ಕಮಲಾಕರ ಮೇಸ್ತ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಶುಕ್ರವಾರ ಬೆಂಗಳೂರಿನಲ್ಲಿ ಭೇಟಿಯಾಗಿ ಮನವಿಪತ್ರ ಸಲ್ಲಿಸಿದರು.
ಪರೇಶ ಮೇಸ್ತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಸಿಬಿಐ ಇತ್ತೀಚೆಗೆ ಹೊನ್ನಾವರ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದೆ. ವರದಿ ಅಸಪರ್ಮಕವಾಗಿದೆ. ಪ್ರಕರಣದಲ್ಲಿ ಸಾಕ್ಷ್ಯಗಳು ನಾಶವಾಗಿರುವ ಸಾಧ್ಯತೆ ಇದೆ. ಇದರಿಂದ ಮರು ತನಿಖೆಗೆ ಆದೇಶಿಸಬೇಕು ಎಂದು ಕಮಲಾಕರ ಮೇಸ್ತ ಒತ್ತಾಯಿಸಿದರು.
ಸ್ಪಂದಿಸಿದ ಸಿಎಂ ಬಸವರಾಜ ಬೊಮ್ಮಾಯಿ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಿ ಮರುತನಿಖೆಗೆ ಕ್ರಮ ಜರುಗಿಸಿ ಪರೇಶ ಮೇಸ್ತ ಅವರ ಕುಟುಂಬದೊಂದಿಗೆ ನಿಲ್ಲುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಶಿವರಾಮ ಹೆಬ್ಬಾರ, ಕೋಟ ಶ್ರೀನಿವಾಸ ಪೂಜಾರಿ, ಎಸ್.ಅಂಗಾರ, ಶಾಸಕರಾದ ದಿನಕರ ಶೆಟ್ಟಿ, ಸುನೀಲ ನಾಯ್ಕ ಇದ್ದರು.
ಹಿನ್ನೆಲೆ: 2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ಆಗಿನ ಸಿಎಂ ಸಿದ್ದರಾಮಯ್ಯ ಅವರ ಕಾರ್ಯಕ್ರಮವಿತ್ತು. ಅಂದೇ ರಾತ್ರಿ ಪಟ್ಟಣದಲ್ಲಿ ಹಿಂದು ಹಾಗೂ ಮುಸ್ಲಿಂ ಗುಂಪುಗಳ ನಡುವೆ ಸಂಘರ್ಷ ನಡೆದಿತ್ತು. ಈ ಸಂದರ್ಭದಲ್ಲಿ ಮೀನುಗಾರ ಯುವಕ ಪರೇಶ ಮೇಸ್ತ ನಾಪತ್ತೆಯಾಗಿದ್ದರು. ಎರಡು ದಿನದ ನಂತರ ಶೆಟ್ಟಿಕೆರೆಯಲ್ಲಿ ಶವ ಪತ್ತೆಯಾಗಿತ್ತು. ಪರೇಶ ಮೇಸ್ತ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಅವರ ತಂದೆ ಸ್ಥಳೀಯ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಐವರು ಮುಸ್ಲಿಂ ಮುಖಂಡರ ವಿರುದ್ಧ ದೂರು ದಾಖಲಾಗಿತ್ತು. ಹಿಂದು ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ತೀಕ್ಷ್ಣವಾದ ಹೇಳಿಕೆ ನೀಡಿದ್ದರು. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದರು.ಇಡೀ ಉತ್ತರ ಕನ್ನಡದಲ್ಲಿ ಇದೇ ವಿಷಯವಾಗಿ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಹೋರಾಟ ಹಿಂಸಾ ಸ್ವರೂಪ ತಾಳಿತ್ತು. ನಂತರ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. 2018ರ ಫೆಬ್ರವರಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಸತತ ನಾಲ್ಕುವರೆ ವರ್ಷ ತನಿಖೆ ನಡೆಸಿದ ಸಿಬಿಐ ಚೆನ್ನೈನ ವಿಶೇಷ ವಿಭಾಗ ಕೆಲ ದಿನಗಳ ಹಿಂದೆ ಪರೇಶ ಮೇಸ್ತ ಸಹಜ ಸಾವು ಎಂದು ವರದಿ ನೀಡಿದೆ. ಈ ಸಂಬಂಧ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದೆ.
ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ: ಸಿಬಿಐ ವರದಿ ನೀಡಿರುವುದು ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ತಾವೇ ಶಿಫಾರಸು ಮಾಡಿದ ಸಂಸ್ಥೆ ವ್ಯತಿರಿಕ್ತ ವರದಿ ನೀಡಿರುವುದು ನಾಯಕರನ್ನು ಇಕ್ಕಟ್ಟಿಗೆ ಸಿಲುಕಿದೆ. ಅವರ ಬಾಯಿಗೆ ಬೀಗ ಬಿದ್ದಿದೆ. ಪರೇಶ ಮೇಸ್ತ ಸಾವು ಹಾಗೂ ನಂತರ ನಡೆದ ಕೋಮು ಸಂಘರ್ಷಗಳಿಂದ ಜಿಲ್ಲೆಯ ಕರಾವಳಿ ಹಾಗೂ ಮಲೆನಾಡಿನಲ್ಲಿ ಹಿಂದುತ್ವದ ಅಲೆ ಜಾಗೃತವಾಗಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅದನ್ನು ಸಮರ್ಥವಾಗಿ ಬಳಸಿಕೊಂಡಿತ್ತು. ಸಿಬಿಐ ಹೊನ್ನಾವರ ಜೆಎಂಎಫ್ಸಿ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ ನಂತರ ಕಾಂಗ್ರೆಸ್ ನಾಯಕರು ಆ ವಿಷಯವಾಗಿ ಖಾರವಾದ ಹೇಳಿಕೆ ನೀಡುತ್ತಿದ್ದಾರೆ. ಸಿಬಿಐಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ, ಈ ವಿಷಯವಾಗಿ ಹೆಚ್ಚಿನ ಪ್ರತಿಕ್ರಿಯೆಗಳನ್ನು ನೀಡದಂತೆ ಬಿಜೆಪಿ ನಾಯಕರಿಗೆ ಪಕ್ಷ ಸೂಚನೆ ಹೊರಡಿಸಿದೆ ಎನ್ನಲಾಗಿದೆ. ಮರು ತನಿಖೆಗೆ ಆದೇಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡುವ ಮೂಲಕ ವಿಷಯವನ್ನು ಸದ್ಯಕ್ಕೆ ಮುಂದೂಡುವ ತಂತ್ರಗಾರಿಕೆ ಬಿಜೆಪಿ ವಲಯದಲ್ಲಿ ನಡೆದಿತ್ತು. ಇದೇ ವೇಳೆ ಪರೇಶ ಮೇಸ್ತ ತಂದೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿರುವುದರಿಂದ ಮರು ತನಿಖೆ ನಡೆಯುವುದು ಖಾತ್ರಿಯಾಗಿದೆ.
ಅಂತಿಮ ವರದಿಯಲ್ಲೇನಿದೆ..?: ಪರೇಶ ಮೇಸ್ತ ಅವರ ಸ್ನೇಹಿತರ ಹೇಳಿಕೆ ಪಡೆಯಲಾಗಿದೆ. ಆತ 2017ರ ಡಿ. 6ರಂದು ನಡೆದ ಆಗಿನ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪರೇಶ ಮೇಸ್ತ ಕುಟುಂಬ ಹಾಗೂ ಯಾವುದೇ ಮುಸ್ಲಿಂ ಕುಟುಂಬದ ನಡುವೆ ಹಿಂದಿನ ಯಾವುದೇ ದ್ವೇಷ ಇರಲಿಲ್ಲ. ಡಿಸೆಂಬರ್ 6 ರಂದು ಹಿಂದು ಮುಸ್ಲಿಂ ಜನರ ಮಧ್ಯೆ ಗಲಾಟೆ ನಡೆದಿತ್ತು. ಆ ಸಂದರ್ಭದಲ್ಲಿ ಸ್ನೇಹಿತರ ಜತೆ ಪರೇಶ ಮೇಸ್ತ ಸಹ ಇದ್ದರು. ಪರೇಶ ಮೇಸ್ತ ದೇಹದ ಮೇಲೆ ಯಾವುದೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ ಗುರುತು ಇರಲಿಲ್ಲ. ಆತನ ಸಾವು ನೀರಿನಲ್ಲಿ ಮುಳುಗಿದ್ದರಿಂದ ಆಗಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಹೇಳಿದೆ. ಹೊನ್ನಾವರದಲ್ಲಿ ಡಿ. 6ರಂದು ನಡೆದ ಕೋಮು ಗಲಭೆ ವೇಳೆ ಓಡುವಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಐದು ಜನ ಆರೋಪಿಗಳು ಪರೇಶ ಮೇಸ್ತ ಕೊಲೆ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ದೊರಕಿಲ್ಲ.